ದೆಹಲಿ-ಎನ್‌ಸಿಆರ್ ಮೂಲದ ಪ್ರಸಿದ್ಧ ಅಶೋಕ ವಿಶ್ವವಿದ್ಯಾಲಯವು 2025–26ನೇ ಸಾಲಿನ ಪ್ಲೇಸ್‌ಮೆಂಟ್‌ನಲ್ಲಿ ನೂರಕ್ಕೆ ನೂರರಷ್ಟು ಸಾಧನೆ ಮಾಡಿದೆ. ಉದ್ಯೋಗದ ನಿರೀಕ್ಷೆಯಲ್ಲಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಭರ್ಜರಿ ಉದ್ಯೋಗಾವಕಾಶಗಳು ಒಲಿದುಬಂದಿದ್ದು, ವಿದ್ಯಾರ್ಥಿಯೊಬ್ಬರು ಬರೋಬ್ಬರಿ 42.5 ಲಕ್ಷ ರೂ.ಗಳ ವಾರ್ಷಿಕ ವೇತನದ ಪ್ಯಾಕೇಜ್ ಪಡೆದಿದ್ದಾರೆ.
ಈ ಬಾರಿ ಒಟ್ಟು 163 ಪ್ರತಿಷ್ಠಿತ ಸಂಸ್ಥೆಗಳು ಕ್ಯಾಂಪಸ್ ಸಂದರ್ಶನ ನಡೆಸಿದ್ದು, ವಿದ್ಯಾರ್ಥಿಗಳಿಗೆ 450ಕ್ಕೂ ಹೆಚ್ಚು ಆಫರ್‌ಗಳನ್ನು ನೀಡಿವೆ. ವಿಶೇಷವೆಂದರೆ, 78 ಹೊಸ ಕಂಪನಿಗಳು ವಿವಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ತಮ್ಮ ಕಂಪನಿಗೆ ಆಯ್ಕೆ ಮಾಡಿಕೊಂಡಿವೆ.
ಕಂಪ್ಯೂಟರ್ ಸೈನ್ಸ್‌ಗೆ ಅತಿಹೆಚ್ಚು ಡಿಮ್ಯಾಂಡ್!
ಈ ವರ್ಷ ಎಲ್ಲಾ ವಲಯಗಳಲ್ಲೂ ವಿದ್ಯಾರ್ಥಿಗಳ ಆರಂಭಿಕ ವೇತನದಲ್ಲಿ (ಸಿಟಿಸಿ) ಭಾರಿ ಏರಿಕೆ ಕಂಡು ಬಂದಿದೆ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯೊಬ್ಬರು ಅತಿ ಹೆಚ್ಚು, ಅಂದರೆ ವಾರ್ಷಿಕ 42.5 ಲಕ್ಷ ರೂ.ಗಳ ಆಫರ್ ಪಡೆದಿದ್ದಾರೆ.
ಇನ್ನು ವಿವಿಯ ಟಾಪ್ ಶೇ. 20ರಷ್ಟು ವಿದ್ಯಾರ್ಥಿಗಳ ಸರಾಸರಿ ವಾರ್ಷಿಕ ವೇತನ 22.5 ಲಕ್ಷ ರೂ.ಗಳಷ್ಟಿದ್ದರೆ, ಮಧ್ಯಮ ವೇತನ 22.0 ಲಕ್ಷ ರೂ. ಆಗಿದೆ.
ಯಾವ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗ?
ಆಯ್ಕೆಯಾದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ.80ರಷ್ಟು ಮಂದಿ ಆರು ಪ್ರಮುಖ ವಲಯಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿ ಶೇ. 20ರಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ಸಿಕ್ಕಿದ್ದು, ಸರಾಸರಿ ವೇತನ 12.7 ಲಕ್ಷ ರೂ. ಆಗಿದೆ. ಇನ್ನು ಕನ್ಸಲ್ಟಿಂಗ್ ಕ್ಷೇತ್ರದಲ್ಲಿ ಎರಡನೇ ಗರಿಷ್ಠ ಶೇ. 18ರಷ್ಟು ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡಿದ್ದು, ಸರಾಸರಿ 16 ಲಕ್ಷ ರೂ. ವೇತನ ಪಡೆದುಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವಲಯದಲ್ಲಿ ಸಂಬಳ ಶೇ. 30ರಷ್ಟು ಭಾರೀ ಏರಿಕೆಯಾಗಿದೆ.
ಸಾಮಾಜಿಕ ಪ್ರಭಾವ ವಲಯದಲ್ಲಿ ಶೇ. 15ರಷ್ಟು ವಿದ್ಯಾರ್ಥಿಗಳಿಗೆ ಅವಕಾಶಗಳು ಸಿಕ್ಕಿದ್ದು, ಸರಾಸರಿ: 11.5 ಲಕ್ಷ ರೂ. ಆರಂಭಿಕ ವೇತನ ಗಳಿಸಲಿದ್ದಾರೆ. ಟೆಕ್ನಾಲಜಿ ವಿಭಾಗದಲ್ಲಿ ಶೇ. 9ರಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ಲಭ್ಯವಾಗಿದ್ದು, ಸರಾಸರಿ 15.1 ಲಕ್ಷ ರೂ. ಸಂಬಳ ಲಭಿಸಿದೆ.
ಡೇಟಾ ಮತ್ತು ರಿಸರ್ಚ್ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕ್ರಮವಾಗಿ ಶೇ. 9 ಹಾಗೂ ಶೇ. 7ರಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಪಡೆದುಕೊಂಡಿದ್ದು, ಕ್ರಮವಾಗಿ ಸರಾಸರಿ 13.5 ಲಕ್ಷ ರೂ. ಹಾಗೂ 11.9 ಲಕ್ಷ ರೂ. ವೇತನ ಪಡೆದುಕೊಂಡಿದ್ದಾರೆ.
ವಿದೇಶಿ ವಿವಿಗಳಲ್ಲೂ ಅಶೋಕ ವಿವಿ ವಿದ್ಯಾರ್ಥಿಗಳದ್ದೇ ಮೇಲುಗೈ
ಉನ್ನತ ಶಿಕ್ಷಣದ ವಿಚಾರದಲ್ಲೂ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. 135ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಬರೋಬ್ಬರಿ 400ಕ್ಕೂ ಅಧಿಕ ಆಫರ್‌ಗಳನ್ನು ಪಡೆದಿದ್ದಾರೆ. ಆಕ್ಸ್‌ಫರ್ಡ್ – ಕೇಂಬ್ರಿಡ್ಜ್‌ನಿಂದ 24, ಹಾಗೂ ಐವಿ ಲೀಗ್ ವಿವಿಗಳಿಂದ 24 ಆಫರ್‌ಗಳು ಬಂದಿವೆ.
ಪ್ರತಿಷ್ಠಿತ ಸ್ಕಾಲರ್‌ಶಿಪ್‌ಗಳ ಸುರಿಮಳೆ
ರೋಡ್ಸ್, ಗೇಟ್ಸ್ ಕೇಂಬ್ರಿಡ್ಜ್, ಫುಲ್‌ಬ್ರೈಟ್ – ನೆಹರು ಸೇರಿದಂತೆ ವಿಶ್ವದ 19 ಅಂತಾರಾಷ್ಟ್ರೀಯ ಪ್ರತಿಷ್ಠಿತ ಸ್ಕಾಲರ್‌ಶಿಪ್‌ಗಳು ಈ ಬಾರಿ ವಿವಿಯ ವಿದ್ಯಾರ್ಥಿಗಳ ಪಾಲಾಗಿವೆ. 16 ವಿದ್ಯಾರ್ಥಿಗಳು ಪಿಎಚ್‌ಡಿ ಪ್ರವೇಶ ಪಡೆದಿದ್ದು, ಅದರಲ್ಲಿ 12 ಮಂದಿಗೆ ವಿದೇಶದಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಲಭ್ಯವಾಗಿದೆ.
ಈ ಅಮೋಘ ಸಾಧನೆಯ ಬಗ್ಗೆ ಮಾತನಾಡಿದ ವಿವಿಯ ಕೆರಿಯರ್ ಅಡ್ವಾನ್ಸ್‌ಮೆಂಟ್ ವಿಭಾಗದ ಉಪಾಧ್ಯಕ್ಷೆ ಪ್ರಿಯಾಂಕಾ ಚಂಧೋಕ್, “ವಿದ್ಯಾರ್ಥಿಗಳ ಪ್ರತಿಭೆ ಹಾಗೂ ವಿವಿಧ ಕಂಪನಿಗಳ ಜೊತೆಗಿನ ನಮ್ಮ ದೀರ್ಘಕಾಲದ ಉತ್ತಮ ಬಾಂಧವ್ಯ ಈ ಶೇ. 100ರಷ್ಟು ಪ್ಲೇಸ್‌ಮೆಂಟ್‌ಗೆ ಕಾರಣವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಕುಲಪತಿ ಋಷಿಕೇಶ ಟಿ. ಕೃಷ್ಣನ್ ಅವರು, “ನಮ್ಮ ವಿವಿಯ ಬಹುಶಿಸ್ತೀಯ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟದ ಪೈಪೋಟಿಗೆ, ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಜಗತ್ತಿಗೆ ಸಮರ್ಥವಾಗಿ ಸಜ್ಜುಗೊಳಿಸುತ್ತಿದೆ ಎನ್ನುವುದಕ್ಕೆ ಈ ಸಾಧನೆಯೇ ಸಾಕ್ಷಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





