ವಿಜಯಪುರ: ವಿಜಯಪುರದ ಯೋಗಾಪುರದ ಶ್ರೀ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ಕೈಗಡಿಯಾರದ ವಿವಾದಕ್ಕೆ ಸಂಬಂಧಿಸಿದ ಗಲಾಟೆಯೊಂದರಲ್ಲಿ 5ನೇ ತರಗತಿಯ 11 ವರ್ಷದ ಬಾಲಕ ಅನ್ಸ್ ಸುನೀಲ್ ದಾರುಣವಾಗಿ ಸಾವನ್ನಪ್ಪಿದ್ದಾನೆ. 9ನೇ ತರಗತಿಯ ಮೂವರು ವಿದ್ಯಾರ್ಥಿಗಳು ಅನ್ಸ್ ಮೇಲೆ ಹಲ್ಲೆ ನಡೆಸಿ, ಆತನ ಕೈಗಡಿಯಾರವನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಬಾಲಕನ ಪೋಷಕರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರ ಮೂಲದ ಸುನೀಲ್ ಮತ್ತು ಶೃತಿ ದಂಪತಿ, ತಮ್ಮ ಮಗ ಅನ್ಸ್ ಉತ್ತಮ ಶಿಕ್ಷಣ ಪಡೆಯಬೇಕೆಂಬ ಆಸೆಯಿಂದ ವಿಜಯಪುರದ ಯೋಗಾಪುರಕ್ಕೆ ಸ್ಥಳಾಂತರಗೊಂಡಿದ್ದರು. ಸುನೀಲ್ ವಿಜಯಪುರದಲ್ಲಿ ಪಾನಿಪುರಿ ಮಾರಾಟ ಮಾಡಿ ಕುಟುಂಬವನ್ನು ಪೋಷಿಸುತ್ತಿದ್ದರು. ತಮ್ಮ ಮಗನನ್ನು ವಿಜಯಪುರ ಹೊರಹೊಲಯದ ಶ್ರೀ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಸೇರಿಸಿದ್ದರು. ಆದರೆ, ಕಳೆದ ಐದು ದಿನಗಳ ಹಿಂದೆ ಶಾಲೆಯಲ್ಲಿ ನಡೆದ ಘಟನೆಯೊಂದರಲ್ಲಿ, ಅನ್ಸ್ ಧರಿಸಿದ್ದ ಕೈಗಡಿಯಾರದ ವಿಚಾರಕ್ಕೆ 9ನೇ ತರಗತಿಯ ಮೂವರು ವಿದ್ಯಾರ್ಥಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದ ಅಸ್ವಸ್ಥಗೊಂಡ ಬಾಲಕನನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಐದು ದಿನಗಳ ನಂತರ ಅನ್ಸ್ ಮೃತಪಟ್ಟಿದ್ದಾನೆ. ಈ ಘಟನೆಯ ಬಗ್ಗೆ ಶಾಲಾ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರೂ, ಅವರು ಸೂಕ್ತ ಕ್ರಮ ಕೈಗೊಳ್ಳದಿರುವುದೇ ಬಾಲಕನ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಶಾಲಾ ಆಡಳಿತ ಮಂಡಳಿಯ ಕೆಲವು ಸಿಬ್ಬಂದಿ, “ನಿಮ್ಮ ಮಗ ಸತ್ತಿದ್ದಾನಾ?” ಎಂದು ಪೋಷಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪವೂ ಕೇಳಿಬಂದಿದೆ.
ಶಾಲೆಯ ಮುಂದೆ ಪ್ರತಿಭಟನೆ:
ಬಾಲಕನ ಸಾವಿನ ಸುದ್ದಿ ತಿಳಿದ ಕೂಡಲೇ, ಪೋಷಕರು ಮತ್ತು ಸ್ಥಳೀಯರು ಶಾಲೆಯ ಮುಂಭಾಗದಲ್ಲಿ ಶವವಿಟ್ಟು ಪ್ರತಿಭಟನೆ ಆರಂಭಿಸಿದರು. ಶಾಲೆಯ ಗೇಟ್ ಬಳಿ ಜನಸಾಗರ ಸೇರಿತ್ತು. ಸ್ಥಳೀಯರು ಮತ್ತು ಬಾಲಕನ ಕುಟುಂಬಸ್ಥರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಲಾ ಆಡಳಿತ ಮಂಡಳಿಯ ಸಿಬ್ಬಂದಿ ಮತ್ತು ಅಧ್ಯಕ್ಷರು ಶಾಲೆಗೆ ಬೀಗ ಹಾಕಿ ಪರಾರಿಯಾದರು ಎಂದು ಆರೋಪಿಸಲಾಗಿದೆ.
ಘಟನೆಯ ಸುದ್ದಿ ತಿಳಿದ ಕೂಡಲೇ ವಿಜಯಪುರ ಡಿವೈಎಸ್‌ಪಿ ಬಸವರಾಜ ಯಲಿಗಾರ, ಗೋಲಗುಂಬಜ್ ಇನ್ಸ್‌ಪೆಕ್ಟರ್ ಮಲ್ಲಯ್ಯ ಮಠಪತಿ ಸೇರಿದಂತೆ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಪೊಲೀಸರು ಪೋಷಕರು ಮತ್ತು ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದರಿಂದ ಪ್ರತಿಭಟನೆಯನ್ನು ಕೈಬಿಟ್ಟ ಸ್ಥಳೀಯರು, ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲು ಸಹಕರಿಸಿದರು.
ಗೋಲಗುಂಬಜ್ ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಬಾಲಕನ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಹಿರಿಯ ವಿದ್ಯಾರ್ಥಿಗಳ ಹಲ್ಲೆಯಿಂದಲೇ ಸಾವು ಸಂಭವಿಸಿತೇ ಇಲ್ಲವೇ ಬೇರೆ ಕಾರಣವಿದೆಯೇ ಎಂಬುದು ತನಿಖೆಯಿಂದ ಸ್ಪಷ್ಟವಾಗಲಿದೆ.