ರಾಜ್ಯದಲ್ಲಿ ದಿನಂಪ್ರತಿ ಒಂದಲ್ಲ ಒಂದು ಅವಾಂತರ, ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಬೆಂಗಳೂರಿನಲ್ಲಿ ನಡೆದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಬೆನ್ನಲ್ಲೇ ಇದೀಗ ತುಮಕೂರು ಹೆದ್ದಾರಿಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 48ರ ನಂದಿಹಳ್ಳಿ ಬಳಿ ಈ ಅಪಘಾತ ಸಂಭವಿಸಿದೆ. ಹೆದ್ದಾರಿಗೆ ಬರುತ್ತಿದ್ದ ಕಂಟೈನರ್ ಲಾರಿಗೆ ಬೈಕ್ ಡಿಕ್ಕಿಯಾಗಿದೆ. ಒಂದೇ ಬೈಕ್ನಲ್ಲಿ ಮೂವರು ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಅಪಘಾತದ ತೀವ್ರತೆ ಹೆಚ್ಚಾಗಿದ್ದ ಕಾರಣ ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 48ರ ಹಿರೇಹಳ್ಳಿ ಸಮೀಪದ ನಂದಿಹಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಂಟೇನರ್ ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಸವಾರರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರನ್ನು ರಾಜೇಶ್ (25), ದನಂಜಯ್ (27), ಮತ್ತು ಧನುಷ್ (23) ಎಂದು ಗುರುತಿಸಲಾಗಿದೆ. ಇವರು ದಾಬಸ್ಪೇಟೆಯ ಖಾಸಗಿ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ರಾತ್ರಿಯ ಕರ್ತವ್ಯ ಮುಗಿಸಿ ತುಮಕೂರಿಗೆ ವಾಪಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅಪಘಾತ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಸಂಭವಿಸಿದ್ದು, ಬೈಕ್ನಲ್ಲಿ ಟ್ರಿಪಲ್ ರೈಡಿಂಗ್ ಮಾಡುತ್ತಿದ್ದ ಸವಾರರು ಪೆಟ್ರೋಲ್ ಬಂಕ್ನಿಂದ ಹೊರಡುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿಯಾಗಿದ್ದಾರೆ. ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಎಎಸ್ಪಿ ಗೋಪಾಲ್ ಮತ್ತು ಡಿವೈಎಸ್ಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.