ಶಿವಮೊಗ್ಗ: ಭದ್ರಾವತಿಯ ಹೊಸಮನೆ ಬಡಾವಣೆಯಲ್ಲಿ ಕ್ರಿಕೆಟ್ ಆಟದ ವೇಳೆ ಸ್ನೇಹಿತರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಕೊನೆಗೊಂಡಿದೆ. 23 ವರ್ಷದ ಅರುಣ್ ಎಂಬ ಯುವಕನನ್ನು ಆತನ ಸ್ನೇಹಿತರೇ ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ. ಈ ಘಟನೆಯಲ್ಲಿ ಸಂಜಯ್ (20) ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನಿನ್ನೆ ಸಂಜೆ ಭದ್ರಾವತಿಯ ಹೊಸಮನೆ ಬಡಾವಣೆಯ ಶಾಲಾ ಮೈದಾನದಲ್ಲಿ ಅರುಣ್, ಸಂಜಯ್, ಸಚಿನ್, ಸಂಜು, ಪ್ರಜ್ವಲ್ ಸೇರಿದಂತೆ ಕೆಲವರು ಕ್ರಿಕೆಟ್ ಆಡುತ್ತಿದ್ದರು. ಆಟದ ವೇಳೆ ಕಿರಿಕಿರಿಯಿಂದ ಗಲಾಟೆ ಆರಂಭವಾಯಿತು. ಈ ಜಗಳದಲ್ಲಿ ಅರುಣ್, ಸಚಿನ್ ಎಂಬಾತನ ಕಪಾಳಕ್ಕೆ ಹೊಡೆದಿದ್ದ ಎಂದು ತಿಳಿದುಬಂದಿದೆ. ಆಟ ಮುಗಿದ ನಂತರ ಅರುಣ್ ಮನೆಗೆ ತೆರಳಿದ್ದಾನೆ.
ರಾತ್ರಿ ವೇಳೆ ಆರೋಪಿಗಳಾದ ಸಚಿನ್, ಸಂಜು, ಪ್ರಜ್ವಲ್ ಮತ್ತು ಇತರ ಕೆಲವರು ಮದ್ಯ ಸೇವಿಸುತ್ತಿದ್ದಾಗ, ಅರುಣ್‌ನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಅರುಣ್ ಜೊತೆಗೆ ಸಂಜಯ್ ಕೂಡ ಬಂದಿದ್ದಾನೆ. ಈ ವೇಳೆ ಹಿಂದಿನ ಜಗಳದ ವಿಷಯವನ್ನು ಮತ್ತೆ ತೆಗೆದುಕೊಂಡ ಆರೋಪಿಗಳು, ಅರುಣ್‌ನ ಎದೆ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಜಗಳದಲ್ಲಿ ಸಂಜಯ್‌ನ ಕೈ ಮತ್ತು ಬೆನ್ನಿಗೆ ಚಾಕು ಇರಿತವಾಗಿದ್ದು, ಆತ ಗಂಭೀರ ಸ್ಥಿತಿಯಲ್ಲಿದ್ದಾನೆ.
ಕೊಲೆಯ ನಂತರ ಆರೋಪಿಗಳಾದ ಸಚಿನ್, ಸಂಜು, ಪ್ರಜ್ವಲ್ ಸೇರಿದಂತೆ ಒಟ್ಟು 4-5 ಜನ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯಲ್ಲಿ ಆರೋಪಿಗಳು, ಅರುಣ್‌ನಿಂದ ಆರಂಭಿಕ ಜಗಳದ ಸೇಡು ತೀರಿಸಿಕೊಳ್ಳಲು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.