ರಾಜ್ಯದಲ್ಲಿ ಆಡಳಿತ ಹೆಚ್ಚು ಕಡಿಮೆ ಮಹಾನಗರ ಪಾಲಿಕೆಯಲ್ಲಿ ಗಾರ್ಬೇಜ್ ಪರಿಸ್ಥಿತಿ ಹೇಗಿದೆಯೋ ಈ ಸರ್ಕಾರದ ಆಡಳಿತವೂ ಗಾರ್ಬೇಜ್‍ಗೆ (ಕಸಕ್ಕೆ) ಸಮನಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, 45-46 ವರ್ಷಗಳ ರಾಜಕೀಯ ಜೀವನದಲ್ಲಿ ಇಂಥ ಕೆಟ್ಟ ಸರ್ಕಾರವನ್ನು ನಾವೆಂದೂ ಕೂಡ ನೋಡಿರಲು ಸಾಧ್ಯವಿಲ್ಲ. ಆದ್ದರಿಂದ ಸಂಪೂರ್ಣ ಅಭಿವೃದ್ಧಿ ಶೂನ್ಯವಾಗಿದೆ. ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅತ್ಯಂತ ಕೆಟ್ಟ ಆಡಳಿತ ವ್ಯವಸ್ಥೆಯನ್ನು ಮಾನ್ಯ ಮುಖ್ಯಮಂತ್ರಿಗಳು ಪರಿಚಯಿಸಿದ್ದಾರೆ ಎಂದು ಆಕ್ಷೇಪಿಸಿದರು.
ಅಭಿವೃದ್ಧಿ ಆಗುತ್ತಿಲ್ಲ, ರೈತರ ಸಮಸ್ಯೆಗಳಿಗೆ ಗಮನ ಕೊಡುತ್ತಿಲ್ಲ, ಹಿಂದುಳಿದವರ, ದಲಿತರು ಉಳಿದವರ ಸಮಸ್ಯೆಗಳಿಗೆ ಪರಿಹಾರ ಕೊಡುವ ಬದಲಾಗಿ ಇವರೆಲ್ಲವನ್ನೂ ಈಗ ಮರೆಮಾಚಿದ್ದಾರೆ. ದುಡ್ಡೆಷ್ಟು ಹೊಡೆದಿರಿ? ಆಸ್ತಿ ಎಷ್ಟು ಮಾಡಿದ್ದೀರಿ? ಜನರಿಗೆ ಎಷ್ಟು ತೆರಿಗೆ ಹಾಕಿದ್ದೀರಿ? ಬೆಲೆ ಏರಿಕೆ ಎಷ್ಟು ಮಾಡಿದಿರಿ? ದಲಿತರ ಹಣ ಎಷ್ಟು ಲೂಟಿ ಮಾಡಿದ್ದೀರಿ? ಎಷ್ಟು ಜನರ ಹನಿಟ್ರ್ಯಾಪ್ ಮಾಡಿದಿರಿ? ಫೋನ್ ಟ್ಯಾಪಿಂಗ್ ಎಷ್ಟಾಗಿದೆ? ಎಂಬ ಚರ್ಚೆ ಆಗುವಂತಾಗಿದೆ ಎಂದು ಟೀಕಿಸಿದರು.
ಇದು ಆಡಳಿತವೇ? ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ಈ ಸರ್ಕಾರ ಇರಲೇಬಾರದಿತ್ತು. ಇಂಥ ಪರಿಸ್ಥಿತಿಗೆ ರಾಜ್ಯವನ್ನು ತಳ್ಳುವ ಬದಲಾಗಿ ರಾಜೀನಾಮೆ ಕೊಟ್ಟು ಆ ಕಡೆ ಹೊರಟು ಹೋಗಬೇಕಿತ್ತು ಎಂದು ತಿಳಿಸಿದರು.
ದಲಿತರಿಗೆ ವಂಚನೆ, ಮೋಸ ಮಾಡಿದ ಕಾಂಗ್ರೆಸ್ ಸರ್ಕಾರ
ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ ಮೀಸಲಾಗಿಟ್ಟ ಎಸ್‍ಇಪಿ, ಟಿಎಸ್‍ಪಿ ಸಂಬಂಧಿಸಿದ 39 ಸಾವಿರ ಕೋಟಿ ಹಣವನ್ನು ನುಂಗಿ ನೀರು ಕುಡಿದದ್ದು ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಎಂದು ಟೀಕಿಸಿದರು. ಕಾಂಗ್ರೆಸ್ ಸರ್ಕಾರ ದಲಿತರಿಗೆ ವಂಚನೆ, ಮೋಸ ಮಾಡಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ಹನಿಟ್ರ್ಯಾಪ್ ವಿಚಾರ. ಇದರಲ್ಲಿ ಬಿಜೆಪಿಯ ಯಾವ ನಾಯಕರೂ ಇಲ್ಲ. ಇದ್ದಿದ್ದರೆ ಈಗಾಗಲೇ ದೊಡ್ಡ ರಂಪರಾಮಾಯಣ ಆಗುತ್ತಿತ್ತು. ಅದನ್ನು ಕೂಡಲೇ ತನಿಖೆಗೆ ಆದೇಶಿಸುತ್ತಿದ್ದರು. ಇದು ಕಾಂಗ್ರೆಸ್‌ನ ಮನೆಯ ಮೇಲೆ ಕಾಂಗ್ರೆಸ್ಸಿನವರೇ ಅತ್ಯಾಚಾರ ಮಾಡಿದಂತಿದೆ ಎಂದು ಟೀಕಿಸಿದರು. ಕಾಂಗ್ರೆಸ್ ನಾಯಕರೇ ತಮ್ಮ ನಾಯಕರ ಮೇಲೆ ಹನಿಟ್ರ್ಯಾಪ್ ಮಾಡಿಸುವ ಅವಸ್ಥೆಯನ್ನು ನಾವಿವತ್ತು ಕಾಣುತ್ತಿದ್ದೇವೆ ಎಂದು ದೂರಿದರು. ಅವರಿಗೆ ಮುಜುಗರವೂ ಇಲ್ಲ, ನೋವೂ ಇಲ್ಲ ಎಂದರು.
ಇಷ್ಟಾದರೂ ಕೂಡ ಹನಿಟ್ರ್ಯಾಪ್ ಬಗ್ಗೆ ಮುಖ್ಯಮಂತ್ರಿಗಳು ಒಂದು ಮಾತನ್ನೂ ಆಡಿಲ್ಲ, ತನಿಖೆ ಮಾಡಿಸೋಣ ಎಂದದ್ದು ಬಿಟ್ಟರೆ ಬೇರೇನೂ ಹೇಳಿಲ್ಲ. ಅಂದ ಮೇಲೆ ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ಭಯ ಏನಾದರೂ ಇದೆಯೇ ಎಂಬ ಅನುಮಾನ ಕಾಡುವಂತಾಗಿದೆ ಎಂದು ತಿಳಿಸಿದರು. ನಂದೂ ಎಲ್ಲಾದರೂ ಇದೆಯೇ ಎಂಬ ಭಯ ಅವರಿಗೂ ಇರಬೇಕು ಎಂದು ವಿಶ್ಲೇಷಿಸಿದರು. ಭಯ ಇಲ್ಲದಿದ್ದರೆ ನಿಮಗೆ ತನಿಖೆ ಮಾಡಿಸಲು ಏನಾಗಿದೆ ಎಂದು ಪ್ರಶ್ನಿಸಿದರು.