ರಾಯಚೂರು\ಮಂಡ್ಯ: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕೆ. ತಿಮ್ಮಾಪುರ ಗ್ರಾಮದಲ್ಲಿ ಆಹಾರ ವಿಷದಿಂದ (ಫುಡ್ ಪಾಯ್ಸನಿಂಗ್) ತಂದೆ ಮತ್ತು ಇನ್ನಿಬ್ಬರು ಹೆಣ್ಣು ಮಕ್ಕಳು ಮೃತಪಟ್ಟ ಘಟನೆ ಇಂದು (ಜುಲೈ 2) ಬೆಳಗ್ಗೆ ನಡೆದಿದೆ. ಈ ದುರಂತದಲ್ಲಿ ರಮೇಶ್ (35) ಮತ್ತು ಆತನ ಮಕ್ಕಳಾದ ನಾಗಮ್ಮ (8), ದೀಪಾ (6) ಮೃತಪಟ್ಟಿದ್ದಾರೆ. ರಮೇಶ್‌ನ ಪತ್ನಿ ಪದ್ಮಾವತಿ (34) ಗಂಭೀರ ಸ್ಥಿತಿಯಲ್ಲಿದ್ದು, ರಾಯಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (RIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಇತರ ಇಬ್ಬರು ಮಕ್ಕಳಾದ ಕೃಷ್ಣ (11) ಮತ್ತು ಚೈತ್ರಾ (10) ಲಿಂಗಸುಗೂರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ (ಜುಲೈ 21) ರಾತ್ರಿ ಕುಟುಂಬದ ಆರು ಜನರು ಚವಳೆಕಾಯಿ(ಜವಳೆಕಾಯಿ) ಪಲ್ಯ, ರೊಟ್ಟಿ, ಮತ್ತು ಅನ್ನ-ಸಾಂಬಾರ್ ಊಟ ಮಾಡಿ ಮಲಗಿದ್ದರು. ರಾತ್ರಿಯಿಂದಲೇ ಕುಟುಂಬಸ್ಥರು ಹೊಟ್ಟೆ ನೋವು ಮತ್ತು ವಾಂತಿಯಿಂದ ನರಳಾಡತೊಡಗಿದರು. ಮುಂಜಾನೆ 4 ಗಂಟೆ ಸುಮಾರಿಗೆ ಎಲ್ಲರನ್ನೂ ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ರಮೇಶ್ ಮತ್ತು ನಾಗಮ್ಮ ಸಾವನ್ನಪ್ಪಿದರು. ಈ ಘಟನೆ ಕವಿತಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಗ್ರಾಮದಲ್ಲಿ ಆತಂಕ ಮೂಡಿಸಿದೆ. ಆಹಾರದ ಮಾದರಿಗಳನ್ನು ಫಾರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡ್ಯದಲ್ಲಿ ಕಲುಷಿತ ಕೇಕ್ ತಿಂದು ಮಗು ಅಸ್ವಸ್ತ:
ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ಕಲುಷಿತ ಕೇಕ್ ತಿಂದು ಮಗುವೊಂದು ಅಸ್ವಸ್ಥಗೊಂಡ ಘಟನೆ ವರದಿಯಾಗಿದೆ. ಸ್ಥಳೀಯ ನಿವಾಸಿ ಆನಂದ್ ಎಂಬುವರು ತಮ್ಮ ಮಗುವಿಗೆ ಐಸ್ ಕೇಕ್ ಖರೀದಿಸಿ ತಿನ್ನಿಸಿದ್ದರು. ಕೇಕ್ ತಿಂದ ಕೆಲವೇ ಕ್ಷಣಗಳಲ್ಲಿ ಮಗುವಿಗೆ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತು. ಮಗುವನ್ನು ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಫುಡ್ ಪಾಯ್ಸನಿಂಗ್ ಆಗಿರುವುದನ್ನು ದೃಢಪಡಿಸಿದ್ದಾರೆ.
ಆನಂದ್ ಅವರ ದೂರಿನ ಮೇರೆಗೆ, ಪುರಸಭೆಯ ಅಧಿಕಾರಿಗಳು ಪಟ್ಟಣದ ಎರಡು ಬೇಕರಿಗಳ ಮೇಲೆ ದಾಳಿ ನಡೆಸಿದರು. ದಾಳಿಯ ವೇಳೆ ಬೇಕರಿಗಳಲ್ಲಿ ಅಶುಚಿತ್ವ ಕಂಡುಬಂದ ಹಿನ್ನೆಲೆಯಲ್ಲಿ ಎರಡೂ ಬೇಕರಿಗಳಿಗೆ ಬೀಗ ಹಾಕಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.





