ಬೆಂಗಳೂರು: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದ ಮಹಾದೇವಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ವೇಳೆ ವ್ಯಾಪಕ ಮತ ಕಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಲಾದ ‘ಮತಗಳ್ಳತನ ಕಾರ್ಯಕ್ರಮ’ದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಚುನಾವಣಾ ಆಯೋಗವು ಸಂವಿಧಾನವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದಾಗಿ ಆರೋಪಿಸಿದರು. “ಬಿಜೆಪಿ 1 ಲಕ್ಷಕ್ಕೂ ಅಧಿಕ ಮತಗಳ್ಳತನ ಮಾಡಿದೆ. ಚುನಾವಣಾ ಆಯೋಗ ಬಿಜೆಪಿಯ ಪರವಾಗಿ ಕೆಲಸ ಮಾಡಿದೆ,” ಎಂದು ರಾಹುಲ್ ಗಾಂಧಿ ಆರೋಪಿಸಿದರು.
ರಾಹುಲ್ ಗಾಂಧಿ ಆರೋಪಗಳೇನು?
ರಾಹುಲ್ ಗಾಂಧಿ ಅವರು ಮಹಾದೇವಪುರ ಕ್ಷೇತ್ರದಲ್ಲಿ 6.5 ಲಕ್ಷ ಮತದಾರರಿದ್ದರೂ, ಅನೇಕ ಅಕ್ರಮಗಳು ನಡೆದಿದ್ದು, ಅಂಕಿಅಂಶಗಳ ಸಹಿತ ಆರೋಪಿಸಿದ್ದಾರೆ.
-
ನಕಲಿ ಮತದಾರರು: 11,965 ನಕಲಿ ಮತದಾರರನ್ನು ಗುರುತಿಸಲಾಗಿದೆ.
-
ತಪ್ಪು ವಿಳಾಸಗಳು: 40,009 ಮತದಾರರು ತಪ್ಪು ಅಥವಾ ನಕಲಿ ವಿಳಾಸಗಳನ್ನು ನೀಡಿದ್ದಾರೆ.
-
ಒಂದೇ ವಿಳಾಸದಲ್ಲಿ ಬಹು ಮತದಾರರು: 10,452 ಮತದಾರರು ಒಂದೇ ವಿಳಾಸದಿಂದ ಮತ ಚಲಾಯಿಸಿದ್ದಾರೆ, ಒಂದು ಕೊಠಡಿಯ ಮನೆಯಲ್ಲಿ 80 ಜನ ವಾಸವಾಗಿದ್ದಾರೆ ಎಂದು ದಾಖಲೆ.
-
ಲೋಪವಿರುವ ಫೋಟೋಗಳು: 4,135 ಮತದಾರರ ಫೋಟೋಗಳಲ್ಲಿ ಲೋಪ ಕಂಡುಬಂದಿದೆ.
-
ಫಾರ್ಮ್ 6 ದುರ್ಬಳಕೆ: 33,692 ಮತದಾರರಿಗೆ ಸಂಬಂಧಿಸಿದಂತೆ ಫಾರ್ಮ್ 6 ದುರ್ಬಳಕೆಯಾಗಿದೆ.
ಅವರು ಮಹಾದೇವಪುರದಲ್ಲಿ 1,00,250 ಮತಗಳು ಕಳ್ಳತನವಾಗಿದ್ದು, ಒಬ್ಬ ವ್ಯಕ್ತಿ ಬಹು ರಾಜ್ಯಗಳಲ್ಲಿ ಮತದಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. “ಒಬ್ಬ ಮತದಾರ ನಾಲ್ಕು ಬೇರೆ ಮತಗಟ್ಟೆಗಳಲ್ಲಿ ಮತ ಹಾಕಿದ್ದಾರೆ. ಒಟ್ಟು 12,500 ನಕಲಿ ಮತಗಳು ದಾಖಲಾಗಿವೆ,” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಸಂವಿಧಾನದ ಮೇಲೆ ದಾಳಿ:
ರಾಹುಲ್ ಗಾಂಧಿ ಅವರು ಬಿಜೆಪಿಯ ಸಿದ್ಧಾಂತವು ಸಂವಿಧಾನ ವಿರೋಧಿಯಾಗಿದೆ ಎಂದು ಟೀಕಿಸಿದ್ದಾರೆ. “ಸಂವಿಧಾನವು ಬಡವರ ರಕ್ಷಣೆಯಾಗಿದೆ. ಇದರ ಮೇಲೆ ದಾಳಿ ಮಾಡಿದರೆ ಬಿಜೆಪಿಗೆ ಉಳಿಗಾಲವಿಲ್ಲ,” ಎಂದು ಎಚ್ಚರಿಕೆ ನೀಡಿದ್ದಾರೆ. “ಕರ್ನಾಟಕದ ಲೋಕಸಭಾ ಚುನಾವಣೆಯ ಸರ್ವೆ ಪ್ರಕಾರ ಕಾಂಗ್ರೆಸ್‌ಗೆ 16 ಸ್ಥಾನಗಳು ಬರಬೇಕಿತ್ತು, ಆದರೆ ಕೇವಲ 9 ಸ್ಥಾನಗಳು ಮಾತ್ರ ಗೆದ್ದಿದ್ದೇವೆ. ಇದಕ್ಕೆ ಮತ ಕಳ್ಳತನವೇ ಕಾರಣ,” ಎಂದು ಆರೋಪಿಸಿದರು.
ಚುನಾವಣಾ ಆಯೋಗದ ಮೇಲೆ ಗಂಭೀರ ಆರೋಪ:
ಚುನಾವಣಾ ಆಯೋಗವು ಬಿಜೆಪಿಯ ಪರವಾಗಿ ಕಾರ್ಯನಿರ್ವಹಿಸಿದೆ ಎಂದು ರಾಹುಲ್ ಗಾಂಧಿ ದೂರಿದ್ದಾರೆ. “ನಾವು ಡಿಜಿಟಲ್ ಮತದಾರರ ಪಟ್ಟಿ ಮತ್ತು ವಿಡಿಯೋ ದಾಖಲೆಗಳನ್ನು ಕೇಳಿದಾಗ, ಆಯೋಗವು ನಿರಾಕರಿಸಿತು. 45 ದಿನಗಳ ಬಳಿಕ ಆ ದಾಖಲೆಗಳನ್ನು ಅಳಿಸಲಾಗಿದೆ,” ಎಂದು ಆರೋಪಿಸಿದ್ದಾರೆ. “ನಾವು ಸಾಕ್ಷಿಗಳನ್ನು ಕೇಳಿದಾಗ, ಆಯೋಗವು ಸಾಕ್ಷಿಗಳನ್ನು ನಾಶಪಡಿಸುವ ಪ್ರಯತ್ನ ಮಾಡುತ್ತಿದೆ,” ಎಂದು ಟೀಕಿಸಿದ್ದಾರೆ.
ಚುನಾವಣಾ ಆಯೋಗವು ಎಲ್ಲಾ ದಾಖಲೆಗಳನ್ನು ಒದಗಿಸಬೇಕು ಎಂದು ರಾಹುಲ್ ಗಾಂಧಿ ಅವರು ಒತ್ತಾಯಿಸಿದ್ದಾರೆ. “ರಾಜ್ಯದಾದ್ಯಂತ ಪರಿಶೀಲನೆ ನಡೆಸಿದರೆ ಇನ್ನೂ ಹೆಚ್ಚಿನ ಮತ ಕಳ್ಳತನದ ಸಾಕ್ಷಿಗಳು ಸಿಗುತ್ತವೆ. ದೇಶದಾದ್ಯಂತ ಡಿಜಿಟಲ್ ಮತದಾರರ ಪಟ್ಟಿಯನ್ನು ಒದಗಿಸಬೇಕು,” ಎಂದು ಬೇಡಿಕೆ ಇರಿಸಿದ್ದಾರೆ. “ಈ ಅಕ್ರಮ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ, ಇಡೀ ದೇಶದಲ್ಲಿ ನಡೆದಿದೆ,” ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆಯಲ್ಲಿ 1 ಕೋಟಿ ಹೊಸ ಮತದಾರರು ಮತ ಚಲಾಯಿಸದಿದ್ದರೂ, ವಿಧಾನಸಭೆ ಚುನಾವಣೆಯಲ್ಲಿ 1 ಕೋಟಿ ಹೊಸ ಮತದಾರರು ಮತದಾನ ಮಾಡಿದ್ದಾರೆ ಎಂದು ದೂರಿದ್ದಾರೆ. “ಈ ಹೊಸ ಮತದಾರರ ಮತಗಳು ಬಿಜೆಪಿಗೆ ಹೋಗಿವೆ. ಕರ್ನಾಟಕದ ಆಂತರಿಕ ಸಮೀಕ್ಷೆಯಲ್ಲಿ 15-16 ಸ್ಥಾನಗಳು ಗೆಲ್ಲಬೇಕಿತ್ತು, ಆದರೆ ಕೇವಲ 9 ಸ್ಥಾನಗಳು ಮಾತ್ರ ಸಿಕ್ಕಿವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು
ಮಹಾರಾಷ್ಟ್ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಜಯ ಸಾಧಿಸಿತು, ಆದರೆ ನಾಲ್ಕು ತಿಂಗಳ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು. “ಈ ವ್ಯತ್ಯಾಸಕ್ಕೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮವೇ ಕಾರಣ,” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ದೇಶಾದ್ಯಂತ ಜನರು ಒಕ್ಕೊರಲಿನಿಂದ ಈ ಅಕ್ರಮದ ವಿರುದ್ಧ ಪ್ರಶ್ನೆ ಮಾಡುಬೇಕು. “ನಾವು ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡಿದ್ದೇವೆ. ಗಾಂಧಿ, ಅಂಬೇಡ್ಕರ್, ನೆಹರು, ಬಸವಣ್ಣನವರ ಧ್ವನಿಯಾದ ಸಂವಿಧಾನವು ಎಲ್ಲರಿಗೂ ಸಮಾನ ಮತದಾನದ ಹಕ್ಕು ನೀಡಿದೆ. ಆದರೆ, ಬಿಜೆಪಿ ಈ ಹಕ್ಕನ್ನು ಕಿತ್ತುಕೊಂಡಿದೆ,” ಎಂದು ರಾಹುಲ್ ಗಾಂಧಿ ಅವರು ಆರೋಪಿಸಿದರು.