ಕಲಬುರಗಿ: ಆರ್‌ಎಸ್‌ಎಸ್ ದೇಶದ್ರೋಹಿ ಸಂಘಟನೆಯಾಗಿದ್ದು, ಮೂರು ಬಾರಿ ನಿಷೇಧಕ್ಕೊಳಗಾಗಿದೆ. ಅದರ ಮೇಲಿನ ನಿಷೇಧ ತೆಗೆದಿದ್ದೇ ದೊಡ್ಡ ತಪ್ಪಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್ ಸಂಘವೊಂದು ದೇಶದ್ರೋಹಿ ಸಂಘಟನೆ. “ಆರ್‌ಎಸ್‌ಎಸ್ ಕಳೆದ 100 ವರ್ಷಗಳಿಂದ ಜಾತಿ ಮತ್ತು ಕೋಮು ಭಾವನೆಯನ್ನು ಕೆರಳಿಸುವ ಕೆಲಸ ಮಾಡುತ್ತಿದೆ. ಈ ಸಂಘಟನೆ ಈಗಾಗಲೇ ಮೂರು ಬಾರಿ ನಿಷೇಧಕ್ಕೊಳಗಾಗಿದೆ, ಆದರೆ ಅದರ ಮೇಲಿನ ನಿಷೇಧವನ್ನು ತೆಗೆದಿರುವುದು ದೊಡ್ಡ ತಪ್ಪು. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್ ಅನ್ನು ನಿಷೇಧಿಸುತ್ತೇವೆ,” ಎಂದರು.
ಮುಂದುವರೆದು, ಆರ್‌ಎಸ್‌ಎಸ್‌ನ ಚಟುವಟಿಕೆಗಳನ್ನು ಟೀಕಿಸುತ್ತಾ, “ದೇಶದ ಐಕ್ಯತೆ ಮತ್ತು ಸಾಮರಸ್ಯವನ್ನು ಕಾಪಾಡಲು ಆರ್‌ಎಸ್‌ಎಸ್ ಇದುವರೆಗೆ ಏನು ಕೊಡುಗೆ ನೀಡಿದೆ? ದೇಶಪ್ರೇಮಿಗಳಾಗಿದ್ದರೆ, ರಾಷ್ಟ್ರಧ್ವಜವನ್ನು ಹಾರಿಸಲು 50 ವರ್ಷಗಳ ಕಾಲ ಏಕೆ ಕಾಯಬೇಕಿತ್ತು? ಈ ಸಂಘಟನೆಯು ದೇಶದ ಐಕ್ಯತೆಗೆ ಸಂಬಂಧವಿರುವ 10 ಕೆಲಸಗಳನ್ನು ಮಾಡಿದೆ ಎಂದು ತಮ್ಮ ಕೊಡುಗೆಯನ್ನು ತೋರಿಸಲಿ,” ಎಂದು ಸವಾಲು ಹಾಕಿದರು. ಇದೇ ವೇಳೆ, ಬಿಜೆಪಿ ವಿರುದ್ಧವೂ ಹರಿಹಾಯ್ದ ಸಚಿವರು, ಬಿಜೆಪಿಯವರು ಆರ್‌ಎಸ್‌ಎಸ್‌ನ ಚೇಲಾಗಳು ಎಂದು ತಿವಿದರು.