ನೆಲಮಂಗಲ: ಬೆಂಗಳೂರಿನ ಬಾಗಲಗುಂಟೆ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ರಾಮಯ್ಯ ಲೇಔಟ್ ನಲ್ಲಿ ಶ್ರೀವಿಷ್ಣು ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತಮಿಳುನಾಡಿನ ತಿರಪತ್ತೂರಿನ ಮೂಲದ ಕವಿಪ್ರಿಯ (24) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕವಿಪ್ರಿಯ ಇದೇ ನರ್ಸಿಂಗ್ ಕಾಲೇಜಿನ ಪಿಜಿಯಲ್ಲಿ ವಾಸವಾಗಿದ್ದಳು. ನೆನ್ನೆ ರಾತ್ರಿ ತನ್ನ ನಿವಾಸದಲ್ಲಿ ಸೀರೆಯಿಂದ ಪ್ಯಾಂಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಸೆಕ್ಯೂರಿಟಿ ಸಿಬ್ಬಂದಿ ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಲಭಿಸದ ಕಾರಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಕವಿಪ್ರಿಯ ತನ್ನ ಊರಿನ ಸೂರ್ಯಪ್ರಕಾಶ್ ಎಂಬ ಯುವಕನ ಜೊತೆ ಇನ್ನೆರಡು ತಿಂಗಳಲ್ಲಿ ಮದುವೆಯಾಗಬೇಕಿತ್ತು. ಅರೆಂಜ್ ಮ್ಯಾರೇಜ್‌ಗೆ ಒಪ್ಪಂದ ಆಗಿದ್ದರೂ ಇಬ್ಬರ ನಡುವೆ ಎಲ್ಲ ಸಿದ್ಧತೆ ನಡೆಯುತ್ತಿತ್ತು. ಆದರೆ, ಯುವಕ ಮದುವೆಯಾಗಲಾರೆ, ನನಗೆ ಮತ್ತೊಬ್ಬ ಯುವತಿಯೊಂದಿಗೆ ಸಂಬಂಧವಿದೆ ಎಂದು ಪ್ರಾಂಕ್ ಕಾಲ್ ಮಾಡಿದ್ದರೆಂದು ಪೋಷಕರ ಕಡೆಯಿಂದ ತಿಳಿದು ಬಂದಿದೆ.
‘ಫೂಲ್ ಮಾಡಲು’ ಯತ್ನಿಸಿದ್ದ ಫೋನ್ ಕಾಲ್ ಕವಿಪ್ರಿಯಾಳಿಗೆ ಮಾನಸಿಕ ಆಘಾತ ತಂದಿದೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕವಿಪ್ರಿಯ ಶವವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಸೂರ್ಯಪ್ರಕಾಶ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ ಕಲಂ 306) ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಆರೋಪಿಯ ಫೋನ್ ಕಾಲ್ ದಾಖಲೆಗಳನ್ನು ಪರಿಶೀಲಿಸುವ ಮೂಲಕ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ