ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
ಬೆಂಗಳೂರಿನಲ್ಲಿ ಎಟಿಎಂ ವಾಹನದಿಂದ 7 ಕೋಟಿ ರಾಬರಿ ಪ್ರಕರಣದ ಬೆನ್ನಲ್ಲೇ ಮತ್ತೊಂದು ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ನೆಲಮಂಗಲದಲ್ಲಿ 17 ಲಕ್ಷ ರೂ. ಮೌಲ್ಯದ ನೂರಾರು ಚಾಕೊಲೇಟ್ ಬಾಕ್ಸ್ ಗಳನ್ನು ದರೋಡೆಕೋರರು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ಘಟನೆಯ ವಿವರ:
ಜಾನ್ಸನ್ ಎಂಟರ್ಪ್ರೈಸಸ್ ಕಂಪನಿಗೆ ಸೇರಿದ ಚಾಕೊಲೇಟ್ ಸರಕುಗಳನ್ನು ಸಾಗಿಸುತ್ತಿದ್ದ ಮಹೇಂದ್ರ ಬುಲೇರೊ ವಾಹನವನ್ನು ಚಾಲಕ ರಂಜಿತ್ ರವರ ಸಹಾಯದಿಂದಲೇ ರಾಬರಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹಾಸನದ ನರೇಶ್ ಅವರಿಗೆ ಅನ್ಲೋಡಿಂಗ್ ಆಗಬೇಕಿದ್ದ ನೂರಾರು ಚಾಕೊಲೇಟ್ ಬಾಕ್ಸ್‌ಗಳು ನಾಪತ್ತೆಯಾಗಿವೆ.
ವಾಹನ ಪತ್ತೆ:
ಜಿಪಿಎಸ್ ಟ್ರ್ಯಾಕಿಂಗ್ ಮೂಲಕ ಪರಿಶೀಲಿಸಿದಾಗ ವಾಹನ ದೊಡ್ಡಬಳ್ಳಾಪುರ ರಸ್ತೆ,ಅಪರಾಧ ಪ್ರಕರಣಕ್ಕೆ ಖ್ಯಾತಿ ಪಡೆದಿರುವ ಇಸ್ಲಾಂಪುರ ಬಳಿ ಪತ್ತೆಯಾಗಿದೆ. ಆದರೆ ವಾಹನದಲ್ಲಿ 17 ಲಕ್ಷ ರೂ. ಮೌಲ್ಯದ ಚಾಕೊಲೇಟ್ ಬಾಕ್ಸ್‌ಗಳು ನಾಪತ್ತೆಯಾಗಿರುವುದು ದೃಢಪಟ್ಟಿದೆ.
ಪೊಲೀಸ್ ಕ್ರಮ:
ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಂಪನಿಯ ಮ್ಯಾನೇಜರ್ ಗುಣಶೇಖರ್ ಪ್ರಕರಣ ದಾಖಲು ಮಾಡಿದ್ದು, ಚಾಲಕ ರಂಜಿತ್ ಸೇರಿದಂತೆ ರಾಬರಿಕೋರರ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೊಬೈಲ್ ಟ್ರಾಕಿಂಗ್ ನಡುವೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆಯನ್ನು ಮುಂದುವರಿಸಿದ್ದಾರೆ.
ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
| Reported by: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ





