ಬೆಂಗಳೂರು: ಕೆ.ಆರ್. ಮಾರ್ಕೆಟ್ ಬಳಿಯ ನಗರ್ಥಪೇಟೆಯ ವಾಣಿಜ್ಯ ಕಟ್ಟಡದಲ್ಲಿ ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಭೀಕರ ಅಗ್ನಿ ಅವಘಡ ಸಂಭವಿಸಿದೆ.
ಈ ದುರಂತದಲ್ಲಿ ರಾಜಸ್ಥಾನ ಮೂಲದ ಮದನ್ ಸಿಂಗ್ (40) ಸುಟ್ಟು ಕರಕಲಾಗಿ ಸಾವನ್ನಪ್ಪಿದ್ದಾರೆ. ಇದೇ ಕಟ್ಟಡದ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದ ಅವರ ಕುಟುಂಬದ ಇತರ ಮೂವರು (ಪತ್ನಿ, 8 ಮತ್ತು 5 ವರ್ಷದ ಇಬ್ಬರು ಮಕ್ಕಳು) ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ನಗರ್ಥಪೇಟೆಯ ನಾಲ್ಕು ಅಂತಸ್ತಿನ ಕಟ್ಟಡದ ನೆಲಮಹಡಿ ಮತ್ತು ಎರಡನೇ ಮಹಡಿಯಲ್ಲಿ ಪ್ಲಾಸ್ಟಿಕ್ ಮ್ಯಾಟ್ ಗೋದಾಮು ಇತ್ತು. ಮೂರನೇ ಮಹಡಿಯಲ್ಲಿ ಮದನ್ ಸಿಂಗ್ ಅವರ ಕುಟುಂಬ ವಾಸಿಸುತ್ತಿತ್ತು.
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ ಎಂದು ಅಗ್ನಿಶಾಮಕ ಇಲಾಖೆ ಅನುಮಾನಿಸಿದೆ. ಬೆಂಕಿಯ ರಭಸಕ್ಕೆ ದಟ್ಟ ಹೊಗೆ ಆವರಿಸಿದ್ದರಿಂದ ರಕ್ಷಣಾ ಕಾರ್ಯಾಚರಣೆ ಸವಾಲಿನಿಂದ ಕೂಡಿತ್ತು.
ರಕ್ಷಣಾ ಕಾರ್ಯಾಚರಣೆ
ವಿಷಯ ತಿಳಿದ ತಕ್ಷಣ ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ರಕ್ಷಣಾ ಸಿಬ್ಬಂದಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಧರಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಮೂರು ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದ್ದು, ತಾಯಿ ಮತ್ತು ಮಕ್ಕಳು ಕಟ್ಟಡದೊಳಗೆ ಸಿಲುಕಿರುವ ಶಂಕೆಯಿದೆ. ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬೆಂಕಿಯ ಕಾರಣದ ಬಗ್ಗೆ ತನಿಖೆ ಆರಂಭವಾಗಿದೆ.