ಕೊಪ್ಪಳ ಜಿಲ್ಲೆಯ ತಾವರಗೇರಾ ಪಟ್ಟಣದ ಸಿಂಧನೂರು ಸರ್ಕಲ್‌ನಲ್ಲಿ ಚೆನ್ನಪ್ಪ ನಾರಿನಾಳ ಎಂಬಾತನನ್ನು ಕೇವಲ 2 ನಿಮಿಷಗಳಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಘಟನೆಯ ಸಂಪೂರ್ಣ ದೃಶ್ಯ ಎಲ್ ಜೆ ಅಯ್ಯಂಗಾರ್ ಬೇಕರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ದೃಶ್ಯ ಬೆಚ್ಚಿಬೀಳಿಸುವಂತಿದೆ.
ಹಳೇ ದ್ವೇಷ ಮತ್ತು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚೆನ್ನಪ್ಪ ನಾರಿನಾಳನನ್ನು ಆರೋಪಿಗಳು ಲಾಂಗ್ ಮತ್ತು ಮಚ್ಚಿನಿಂದ ದಾಳಿ ಮಾಡಿ ಕೊಲೆಗೈದಿದ್ದಾರೆ. ಈ ಘಟನೆಯ ಸಂಪೂರ್ಣ ದೃಶ್ಯ ಬೇಕರಿಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ದುಷ್ಕರ್ಮಿಗಳ ಕೃತ್ಯ ಸಿನಿಮಾ ಶೈಲಿಯಲ್ಲಿ ನಡೆದಿರುವುದು ದೃಶ್ಯಗಳಿಂದ ಸ್ಪಷ್ಟವಾಗಿದೆ.
ಸಿಸಿಟಿವಿ ದೃಶ್ಯದಲ್ಲಿ, ಚೆನ್ನಪ್ಪ ಬೇಕರಿಯೊಳಗೆ ರಕ್ಷಣೆಗಾಗಿ ಓಡಿಬಂದರೂ, ನಾಲ್ವರು ದುಷ್ಕರ್ಮಿಗಳು ಮಚ್ಚಿನಿಂದ ದಾಳಿ ಮಾಡಿದ್ದಾರೆ. ಚೆನ್ನಪ್ಪ ಕೈ ಮುಗಿದು ಬೇಡಿಕೊಂಡರೂ, ಆರೋಪಿಗಳು ಬೇಕರಿಯಿಂದ ಅವನನ್ನು ಹೊರಗೆ ಎಳೆದು ಕೊಲೆಗೈದಿದ್ದಾರೆ. ಈ ಘಟನೆಯ ಸಂದರ್ಭದಲ್ಲಿ ಬೇಕರಿಯ ಮಾಲೀಕ ಮತ್ತು ಗ್ರಾಹಕರು ಗಾಬರಿಗೊಂಡಿದ್ದು, ಯಾರೂ ಸಹಾಯಕ್ಕೆ ಬಂದಿಲ್ಲ. ದೃಶ್ಯಗಳು ಕಿರಾತಕರ ದಾಳಿಯ ಭೀಕರತೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ.
ಮೃತ ಚೆನ್ನಪ್ಪನ ಕುಟುಂಬಸ್ಥರ ದೂರಿನ ಆಧಾರದ ಮೇಲೆ, 10 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳಾದ ರವಿ ನಾರಿನಾಳ, ಪ್ರದೀಪ್ ನಾರಿನಾಳ, ಮಂಜುನಾಥ್ ನಾರಿನಾಳ, ನಾಗರಾಜ್ ನಾರಿನಾಳ, ಶ್ಯಾಮಣ್ಣ ನಾರಿನಾಳ ಸೇರಿದಂತೆ ಒಟ್ಟು 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ 7 ಜನ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಬಂಧಿತ ಆರೋಪಿಗಳೆಂದರೆ ರವಿ, ಪ್ರದೀಪ್, ಮಂಜುನಾಥ್, ನಾಗರಾಜ್, ಮಂಜುನಾಥ್, ಗೌತಮ್, ಮತ್ತು ಪ್ರಮೋದ್.