‘ದೃಶ್ಯ’ ಸಿನಿಮಾ ನೋಡಿ ಎದೆ ಝಲ್ ಆಗಿತ್ತಾ. ಇದೀಗ ರಿಯಲ್ ಲೈಫ್‌ನಲ್ಲಿ ‘ದೃಶ್ಯ ಪಾರ್ಟ್-3’ ನಡೆದಿದೆ. 40 ಲಕ್ಷ ಸಾಲ ವಾಪಸ್ ಕೇಳಿದ್ದಕ್ಕೆ ಸ್ವಂತ ಸಹೋದರ ಸಂಬಂಧಿಯನ್ನೇ ಕೊಲೆ ಮಾಡಿ, ಅದೇ ಮನೆಯ ಒಳಗೆ ಗುಂಡಿ ತೋಡಿ ಹೆಣವನ್ನು ಹೂತುಹಾಕಿದ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಆಂಧ್ರಪ್ರದೇಶದ ಕುಪ್ಪಂ ಮೂಲದ ಇಂಜಿನಿಯರ್ ಶ್ರೀನಾಥ್ (ವಯಸ್ಸು 38) ಅವರು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನೆರಳೂರಿನಲ್ಲಿ ಪತ್ನಿ ಮತ್ತು ಮಗನ ಜೊತೆ ವಾಸಿಸುತ್ತಿದ್ದರು. ಉತ್ತಮ ಸಂಬಳದ ಉದ್ಯೋಗದಲ್ಲಿದ್ದ ಶ್ರೀನಾಥ್, ತನ್ನ ಸಹೋದರ ಸಂಬಂಧಿ ಪ್ರಭಾಕರ್‌ಗೆ “ನಿನ್ನ ಹಣ ಡಬಲ್ ಮಾಡಿಕೊಡ್ತೀನಿ” ಎಂದು ನಂಬಿಸಿ 40 ಲಕ್ಷ ರೂಪಾಯಿ ಸಾಲ ಕೊಟ್ಟಿದ್ದರು.
ಇತ್ತೀಚೆಗೆ ಶ್ರೀನಾಥ್ ಹಣ ವಾಪಸ್ ಕೇಳಿದಾಗ ಪ್ರಭಾಕರ್ ಆಕ್ರೋಶಗೊಂಡ. “ಹಣ ಕೊಡ್ತೀನಿ ಬಾ” ಎಂದು ಶ್ರೀನಾಥ್‌ನ್ನು ಆಂಧ್ರದ ಕುಪ್ಪಂಗೆ ಕರೆಸಿಕೊಂಡು ಹೋದ. ಮನೆಗೆ ಬಂದ ತಕ್ಷಣ ತಲೆಗೆ ಸುತ್ತಿಗೆಯಿಂದ ಜಜ್ಜಿ ಕೊಂದ ಪ್ರಭಾಕರ್, ತನ್ನ ಸ್ನೇಹಿತ ಜಗದೀಶ್‌ನ ಸಹಾಯದಿಂದ ಅದೇ ಮನೆಯ ಒಳಗೆ ಗುಂಡಿ ತೋಡಿ ಹೆಣವನ್ನು ಹೂತುಹಾಕಿದ.
ಕೊಲೆಯಾದ ಬಳಿಕ ಪ್ರಭಾಕರ್ ಏನೂ ಗೊತ್ತಿಲ್ಲದಂತೆ ನಾಟಕವಾಡಿದ. ಶ್ರೀನಾಥ್ ಪತ್ನಿ ಫೋನ್ ಮಾಡಿ “ನನ್ನ ಗಂಡ ಕುಪ್ಪಂಗೆ ನಿಮ್ಮ ಬಳಿ ಹೋಗಿದ್ದಾರೆ” ಎಂದು ಕೇಳಿದಾಗ “ಇಲ್ಲ ಇಲ್ಲ, ಬಂದಿಲ್ಲ” ಎಂದು ಸುಳ್ಳು ಹೇಳಿದ್ದ. ಎರಡು ದಿನ ಕಳೆದರೂ ಶ್ರೀನಾಥ್ ಮನೆಗೆ ಬಾರದಿದ್ದಾಗ ಪತ್ನಿ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದರು.
ಅತ್ತಿಬೆಲೆ ಪೊಲೀಸರು ತನಿಖೆ ಆರಂಭಿಸಿ ಪ್ರಭಾಕರ್ ಮತ್ತು ಜಗದೀಶ್‌ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂಪೂರ್ಣ ಕೊಲೆ ರಹಸ್ಯ ಬಯಲಾಯ್ತು. ಹಂತಕರು “ಕುಪ್ಪಂನ ನನ್ನ ಮನೆಯಲ್ಲೇ ಹೂತಿದ್ದೇವೆ” ಎಂದು ಬಾಯ್ಬಿಟ್ಟರು. ತಕ್ಷಣ ಆಂಧ್ರ ಪೊಲೀಸರ ಸಹಕಾರದೊಂದಿಗೆ ಕುಪ್ಪಂ ತಹಶೀಲ್ದಾರ್ ಆದೇಶದ ಮೇಲೆ ಮನೆಯೊಳಗೆ ಅಗೇತ ನಡೆಸಿ ಮೃತದೇಹವನ್ನು ಹೊರತೆಗೆಯಲಾಯಿತು.
ಪ್ರಕರಣದಲ್ಲಿ ಪ್ರಭಾಕರ್ ಮತ್ತು ಜಗದೀಶ್ ಇಬ್ಬರನ್ನೂ ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. ಕೊಲೆ, ಆಧಾರ ನಾಶ ಮತ್ತು ಸಾಕ್ಷ್ಯ ತಿರುಚುವ ಆರೋಪದಡಿ ಕೇಸ್ ದಾಖಲಾಗಿದೆ.





