ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕಾಲೇಜೊಂದರ ಇಬ್ಬರು ಉಪನ್ಯಾಸಕರು ಮತ್ತು ಅವರ ಸ್ನೇಹಿತನೊಬ್ಬ ವಿದ್ಯಾರ್ಥಿನಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬೆಂಗಳೂರಿನ ಮಾರತಹಳ್ಳಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಆರೋಪಿಗಳನ್ನು ಫಿಸಿಕ್ಸ್ ಉಪನ್ಯಾಸಕ ನರೇಂದ್ರ, ಬಯಾಲಜಿ ಉಪನ್ಯಾಸಕ ಸಂದೀಪ್, ಮತ್ತು ಅವರ ಗೆಳೆಯ ಅನೂಪ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಸಂತ್ರಸ್ತ ವಿದ್ಯಾರ್ಥಿನಿ ಪಿಯುಸಿ ವ್ಯಾಸಂಗ ಮಾಡುತಿದ್ದ ಸಂದರ್ಭದಲ್ಲಿ ನೋಟ್ಸ್ ನೀಡುವ ನೆಪದಲ್ಲಿ ಫಿಸಿಕ್ಸ್ ಉಪನ್ಯಾಸಕ ನರೇಂದ್ರ ವಿದ್ಯಾರ್ಥಿನಿಯ ಜೊತೆ ಸಲುಗೆ ಬೆಳೆಸಿಕೊಂಡಿದ್ದ. ಚಾಟಿಂಗ್ ಮತ್ತು ನೋಟ್ಸ್ ಒದಗಿಸುವ ಮೂಲಕ ಆಕೆಯ ವಿಶ್ವಾಸ ಗಳಿಸಿದ್ದ ಆತ, ವಿದ್ಯಾರ್ಥಿನಿ ಬೆಂಗಳೂರಿಗೆ ಬಂದ ನಂತರವೂ ಸಂಪರ್ಕವನ್ನು ಮುಂದುವರಿಸಿದ್ದ. ಮಾರತಹಳ್ಳಿಯ ಗೆಳೆಯನ ರೂಮ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಆತ, ಘಟನೆಯನ್ನು ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದ.
ಇದೇ ರೀತಿ, ಬಯಾಲಜಿ ಉಪನ್ಯಾಸಕ ಸಂದೀಪ್ ಕೂಡ ನರೇಂದ್ರನ ಕೃತ್ಯವನ್ನು ಆಧರಿಸಿ, “ನಿನ್ನ ಫೋಟೊ ಮತ್ತು ವಿಡಿಯೋ ನನ್ನ ಬಳಿ ಇವೆ, ಕಾಲೇಜಿನಲ್ಲಿ ಎಲ್ಲರಿಗೂ ತಿಳಿಸುವೆ” ಎಂದು ಬ್ಲ್ಯಾಕ್‌ಮೇಲ್ ಮಾಡಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದ. ಇದೇ ರೂಮ್‌ನ ಮಾಲೀಕ ಅನೂಪ್, “ನೀನು ಈ ರೂಮ್‌ಗೆ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ” ಎಂದು ಬೆದರಿಕೆ ಹಾಕಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.
ಆರಂಭದಲ್ಲಿ ಆರೋಪಿಗಳ ಬೆದರಿಕೆಗೆ ಭಯಗೊಂಡಿದ್ದ ವಿದ್ಯಾರ್ಥಿನಿ, ಕೃತ್ಯ ನಿರಂತರವಾಗಿ ಮುಂದುವರಿದಾಗ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಪೋಷಕರು ಆಕೆಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಕರೆದೊಯ್ದು ಕೌನ್ಸೆಲಿಂಗ್ ಕೊಡಿಸಿದ್ದಾರೆ. ಆಯೋಗದ ಸಹಾಯದಿಂದ ವಿದ್ಯಾರ್ಥಿನಿ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಈ ಉಪನ್ಯಾಸಕರು ಈ ಹಿಂದೆಯೂ ಇತರ ವಿದ್ಯಾರ್ಥಿನಿಯರ ಮೇಲೆ ಇದೇ ರೀತಿಯ ಕೃತ್ಯ ಎಸಗಿರುವ ಸಾಧ್ಯತೆ ಇದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.