ರಾಜ್ಯದಲ್ಲಿ ಮತ್ತೊಮ್ಮೆ ದೊಡ್ಡ ಮಟ್ಟದ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಮಠದ ಸ್ವಾಮೀಜಿ, ಗಣ್ಯ ಮಂತ್ರಿಗಳು, IPS ಅಧಿಕಾರಿಗಳ ಹೆಸರನ್ನು ಬಳಸಿಕೊಂಡು ಕೋಟಿ ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಇದರಲ್ಲಿ ಮುಖ್ಯ ಆರೋಪಿ ಸನ್ನಿ ಎಂ. ನಾಯಕ್ ಎಂಬಾತನಿಂದ ರಾಜಮನೆ ಗ್ರೂಪ್ಸ್‌ನ ಎಂಡಿ ಆಗಿರುವುದಾಗಿ ಹೇಳಲಾಗಿದೆ.
ಬೆಂಗಳೂರು ಮತ್ತು ದಾಬಸ್‌ಪೇಟೆ ಇಂಡಸ್ಟ್ರಿಯಲ್ ಏರಿಯಾದಲ್ಲಿ KIADB (ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾ ಡೆವಲಪ್‌ಮೆಂಟ್ ಬೋರ್ಡ್) ಮೂಲಕ ಸೈಟ್ ಅಲಾಟ್‌ಮೆಂಟ್ ಮಾಡಿಸಿಕೊಡುವುದಾಗಿ ಭರವಸೆ ನೀಡಿ, ಉದ್ಯಮಿಗಳಾದ ರಾಜಗೋಪಾಲ್ ಮತ್ತು ಮಾಲ್ತೇಶ್ ಅವರಿಂದ ಕೋಟಿ ಕೋಟಿ ರೂಪಾಯಿ ಪಡೆದು ವಂಚಿಸಲಾಗಿದೆ ಎಂಬುದು ದೂರು. ಆರೋಪಿಯು ತನ್ನೊಂದಿಗೆ ಮಂತ್ರಿಗಳು, IPS ಅಧಿಕಾರಿಗಳ ಪೋಟೋಗಳನ್ನು ತೋರಿಸಿ ನಂಬಿಕೆಗೆ ಪಾತ್ರನಾಗಿ ಕಾಣಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಹಂತಹಂತವಾಗಿ ಹಣ ಪಡೆದು, ಸೈಟ್ ಕೊಡಿಸುವುದಾಗಿ ಮಾತು ಕೊಟ್ಟರೂ ಯಾವುದೇ ಪ್ರಗತಿ ಇಲ್ಲದೇ ಉದ್ಯಮಿಗಳು ಮೋಸ ಹೋಗಿದ್ದಾರೆ. ಈ ವಂಚನೆಯ ಬಗ್ಗೆ ಉದ್ಯಮಿಗಳು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ದೂರನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಭಾವಿ ವ್ಯಕ್ತಿಗಳ ಹೆಸರನ್ನು ಬಳಸಿಕೊಂಡು ಇಂತಹ ವಂಚನೆಗಳು ನಡೆಯುತ್ತಿರುವುದು ಗಂಭೀರ ವಿಷಯವಾಗಿದ್ದು, ಸಾರ್ವಜನಿಕರು ಮತ್ತು ಉದ್ಯಮಿಗಳು ಇಂತಹ ಆಫರ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬ ಎಚ್ಚರಿಕೆಯೂ ಹೊರಬಂದಿದೆ. ಈ ಪ್ರಕರಣದಲ್ಲಿ ಇನ್ನಷ್ಟು ವಿವರಗಳು ಬಹಿರಂಗವಾಗುವ ಸಾಧ್ಯತೆ ಇದೆ.