ದೇವರ ಪ್ರಸಾದ‌ ಸೇವಿಸಿ‌ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Untitled design 2026 06 27T231812.456

ತುಮಕೂರು (ಪಾವಗಡ): ದೇವರ ಮಹೋತ್ಸವ ಹಾಗೂ ಗೃಹಪ್ರವೇಶ ಕಾರ್ಯಕ್ರಮದ ವೇಳೆ ನೀಡಲಾದ ಪ್ರಸಾದ ಮತ್ತು ಊಟ ಸೇವಿಸಿದ ಬಳಿಕ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯೊಂದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೆ. ಸೇವಾಲಾಲ್ ಪುರ ತಾಂಡಾದಲ್ಲಿ ನಡೆದಿದೆ.

ಅಸ್ವಸ್ಥರಲ್ಲಿ 40ಕ್ಕೂ ಹೆಚ್ಚು ಮಂದಿಯನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವವರಲ್ಲಿ 7ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ.

ಗ್ರಾಮದಲ್ಲಿ ಸತ್ತಿ ದೇವರ ಹಬ್ಬ ಮತ್ತು ಗೃಹಪ್ರವೇಶ ಸಮಾರಂಭದ ಅಂಗವಾಗಿ ನೂರಾರು ಜನರಿಗೆ ಪ್ರಸಾದ ಹಾಗೂ ಊಟವನ್ನು ನೀಡಲಾಗಿತ್ತು. ಊಟದಲ್ಲಿ ಪಲಾವ್, ಬಾದುಷಾ ಮತ್ತು ಬಟಾಣಿ ಪಲ್ಯ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಬಡಿಸಲಾಗಿತ್ತು. ಗುರುವಾರ ಸಂಜೆ ನಡೆದ ಕಾರ್ಯಕ್ರಮದ ಬಳಿಕ ತಡರಾತ್ರಿ ಊಟ ಸೇವಿಸಿದ ಹಲವರಲ್ಲಿ ವಾಂತಿ, ಭೇದಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದ್ದು, ನಂತರ ಅಸ್ವಸ್ಥಗೊಂಡಿದ್ದಾರೆ.

ಅಸ್ವಸ್ಥಗೊಂಡವರನ್ನು ಸ್ಥಳೀಯರು ಹಾಗೂ ಕುಟುಂಬಸ್ಥರು ತಕ್ಷಣವೇ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಎಲ್ಲರಿಗೂ ಚಿಕಿತ್ಸೆ ನೀಡುತ್ತಿದ್ದು, ಬಹುತೇಕರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಸದ್ಯ ಯಾರಿಗೂ ಪ್ರಾಣಾಪಾಯ ಇಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಕೆಲವರಿಗೆ ವಿಶೇಷ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಶ್ ನೇತೃತ್ವದ ಆರೋಗ್ಯ ಇಲಾಖೆ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದೆ. ಗ್ರಾಮದಲ್ಲೇ ಮೊಬೈಲ್ ಕ್ಲಿನಿಕ್ ಆರಂಭಿಸಿ, ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆ ಹೊಂದಿದ್ದವರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ. 

ಈ ಘಟನೆಗೆ ಆಹಾರ ವಿಷಬಾಧೆಯೇ ಕಾರಣವೋ ಅಥವಾ ಕಲುಷಿತ ನೀರಿನ ಸೇವನೆಯಿಂದ ಸೋಂಕು ಉಂಟಾಗಿದೆಯೋ ಎಂಬ ಬಗ್ಗೆ ಆರೋಗ್ಯ ಇಲಾಖೆ ತನಿಖೆ ಆರಂಭಿಸಿದೆ. ಕಾರ್ಯಕ್ರಮದಲ್ಲಿ ಬಡಿಸಲಾದ ಆಹಾರ ಮತ್ತು ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ವೈದ್ಯಕೀಯ ಹಾಗೂ ಪ್ರಯೋಗಾಲಯದ ವರದಿ ಬಂದ ಬಳಿಕವೇ ಅಸ್ವಸ್ಥತೆಗೆ ನಿಖರ ಕಾರಣ ತಿಳಿಯಲಿದೆ.

 

Exit mobile version