ಚಿಕ್ಕಬಳ್ಳಾಪುರ, ಜೂನ್ 28: ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಅವಮಾನ ಮಾಡಲು ಚಪ್ಪಲಿ ಎಸೆದ ಪ್ರಕರಣದಲ್ಲಿ ಪೊಲೀಸರು ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿ, ಸುಮಾರು 150 ಮಂದಿ ವಿರುದ್ಧ ತನಿಖೆ ಆರಂಭಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಭಾಷಣ ಮಾಡಲು ಮುಂದಾದ ವೇಳೆ ಅವರಿಗೆ ಅಡ್ಡಿಪಡಿಸಿ ಗಲಾಟೆ ನಡೆಸಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಶಾಸಕರು ತಮ್ಮ ವಾಹನದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರತ್ತ ಚಪ್ಪಲಿ ಎಸೆಯಲಾಗಿತ್ತು.
ನಾಲ್ವರು ಆರೋಪಿಗಳ ಬಂಧನ
ಈ ಕುರಿತು ಮಾಹಿತಿ ನೀಡಿರುವ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಅವರು, “ಘಟನೆಯಲ್ಲಿ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಗಲಾಟೆಯಲ್ಲಿ ಸುಮಾರು 100-150 ಮಂದಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ವಿಡಿಯೋ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಉಳಿದ ಆರೋಪಿಗಳ ಪತ್ತೆಗೆ ತೀವ್ರ ಶೋಧಕಾರ್ಯ ಮುಂದುವರೆದಿದೆ” ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯ ಸೇರಿದಂತೆ ವಿವಿಧ ಜಾತಿ-ಸಮುದಾಯದ ಸಾರ್ವಜನಿಕರು ಭಾಗವಹಿಸಿದ್ದರು. ಗದ್ದಲ ಎಬ್ಬಿಸಿದವರು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಕಾರ್ಯಕರ್ತರೋ ಅಥವಾ ಸಾಮಾನ್ಯ ಜನರೋ ಎಂಬುದನ್ನು ತನಿಖೆ ಮೂಲಕ ಕಂಡುಹಿಡಿಯಲಾಗುತ್ತಿದೆ. ಘಟನೆಯ ಹಿಂದೆ ಯಾರೇ ಇದ್ದರೂ, ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ಇಲಾಖೆಯ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ಅವರು, “ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ಸಮರ್ಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಇದರಲ್ಲಿ ಪೊಲೀಸರ ಯಾವುದೇ ವೈಫಲ್ಯವಿಲ್ಲ. ಇದು ಶಾಸಕರಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡುವ ಯತ್ನವಾಗಿದ್ದು, ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ
ಶಾಸಕ ಪ್ರದೀಪ್ ಈಶ್ವರ್ ಅವರ ಮೇಲಿನ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ನಿವಾಸದ ಎದುರು ಬೃಹತ್ ಪ್ರತಿಭಟನೆ ನಡೆಸಿ, ದಾಳಿ ಮಾಡಿದವರನ್ನು ತಕ್ಷಣವೇ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ತೀವ್ರ ಹೈಡ್ರಾಮಾ ನಡೆದಿತ್ತು. ಭಾಷಣ ಮಾಡಲು ಮುಂದಾದ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಕೆಲವರು ಅಡ್ಡಿಪಡಿಸಿ ಗಲಾಟೆ ಎಬ್ಬಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಪ್ರದೀಪ್ ಈಶ್ವರ್ ಅವರ ಕಾರಿನಲ್ಲಿ ಮಾತನಾಡುತ್ತಿದ್ದಾಗ ಚಪ್ಪಲಿ ಎಸೆಯುವ ಮೂಲಕ ಶಾಸಕರಿಗೆ ಅವಮಾನ ಮಾಡುವ ಯತ್ನ ನಡೆದಿತ್ತು.
