ಉಡುಪಿ: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಭೀಕರ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಉಡುಪಿಯಲ್ಲಿ ಮುಸ್ಲಿಂ ಯುವಕನೊಬ್ಬನ ಕೊಲೆಗೆ ಯತ್ನ ನಡೆದ ಘಟನೆ ಕರಾವಳಿ ಕರ್ನಾಟಕದಲ್ಲಿ ಕೋಮು ಉದ್ವಿಗ್ನತೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಉಡುಪಿ ತಾಲೂಕಿನ ಅತ್ರಾಡಿಯಲ್ಲಿ ಮುಸ್ಲಿಂ ಆಟೋ ಚಾಲಕ ಅಬೂಬಕ್ಕರ್ ಎಂಬುವರ ಮೇಲೆ ದಾಳಿ ನಡೆದಿದೆ. ಆರೋಪಿಗಳಾದ ಸುಶಾಂತ್ ಮತ್ತು ಸಂದೇಶ್ ಪೂಜಾರಿ ಎಂಬಿಬ್ಬರು ಅಬೂಬಕ್ಕರ್‌ರ ಆಟೋವನ್ನು ಅಡ್ಡಗಟ್ಟಿ, ಅವರನ್ನು ಕೊಲೆಗೈಯಲು ಯತ್ನಿಸಿದ್ದಾರೆ. ಘಟನೆಯ ಕುರಿತು ಕೂಡಲೇ ಕಾರ್ಯಪ್ರವೃತ್ತರಾದ ಹಿರಿಯಡ್ಕ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪೊಲೀಸ್ ವಿಚಾರಣೆಯ ವೇಳೆ, ಆರೋಪಿಗಳಾದ ಸುಶಾಂತ್ ಮತ್ತು ಸಂದೇಶ್ ಪೂಜಾರಿ, ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಈ ಕೃತ್ಯವನ್ನು ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಯಿಂದ ಉಡುಪಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ಶಾಂತಿ ಕಾಪಾಡಲು ಕಟ್ಟೆಚ್ಚರ ವಹಿಸಿದ್ದಾರೆ.