ಬ್ರಹ್ಮಾವರ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಉಡುಪಿಯ ಬ್ರಹ್ಮಾವರ ಠಾಣೆಯಲ್ಲಿ ತಿಮರೋಡಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪೊಲೀಸರು ತಿಮರೋಡಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಆದರೆ, ಆತ ವಿಚಾರಣೆಗೆ ಹಾಜರಾಗದ ಕಾರಣ, ಇಂದು ಬೆಳಿಗ್ಗೆ ಉಡುಪಿ ಸಹಾಯಕ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್ ನೇತೃತ್ವದ ತಂಡವು ತಿಮರೋಡಿಯ ಉಜಿರೆಯ ನಿವಾಸಕ್ಕೆ ಭೇಟಿ ನೀಡಿ ಆತನನ್ನು ವಶಕ್ಕೆ ಪಡೆದಿದೆ.
ಏನಿದು ಪ್ರಕರಣ?
ಆಗಸ್ಟ್ 16ರಂದು ಮಹೇಶ್ ಶೆಟ್ಟಿ ತಿಮರೋಡಿಯ ಫೇಸ್‌ಬುಕ್ ಪೇಜ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ತೇಜೋವಧೆ ಮಾಡಿರುವ ಆರೋಪವಿದೆ. ಈ ಕುರಿತು ಉಡುಪಿ ಗ್ರಾಮಾಂತರ ಬಿಜೆಪಿ ಮಂಡಲಾಧ್ಯಕ್ಷ ರಾಜೀವ ಕುಲಾಲ್ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ತಿಮರೋಡಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 352 ಮತ್ತು 353(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ ಠಾಣೆಯ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.