ಅಧಿಕಾರಿಯ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿದ್ದ ಖಾಸಗಿ ಯೂಟ್ಯೂಬ್ ಚಾನೆಲ್ ಮಾಲೀಕ ಹಾಗೂ ಭ್ರಷ್ಟ ಅಧಿಕಾರಿಯೊಬ್ಬರ ಅಸಲಿ ಮುಖ ಈಗ ಅನಾವರಣಗೊಂಡಿದೆ. ಕಳಲುಘಟ್ಟ ಪಂಚಾಯಿತಿಯ ಪಿಡಿಓ ಗೀತಾಮಣಿ ಮತ್ತು ಯೂಟ್ಯೂಬರ್ ಗಂಗಾಧರ್ ಈಗ ಲೋಕಾಯುಕ್ತರ ಅತಿಥಿಗಳಾಗಿದ್ದಾರೆ.
ಘಟನೆಯ ಹಿನ್ನೆಲೆ:
ಹೆಗ್ಗನಹಳ್ಳಿಯ ನಿವಾಸಿ ಫೈಜುಲ್ಲಾಸಾಬ್ ಎಂಬುವವರು ತಮ್ಮ ಆಸ್ತಿಯ ಖಾತೆ ಬದಲಾವಣೆಗಾಗಿ ಕಳಲುಘಟ್ಟ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಪಿಡಿಓ ಗೀತಾಮಣಿ ಅವರು 1.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ನೇರವಾಗಿ ಹಣ ಪಡೆಯುವ ಬದಲು, ‘ಚಾಮುಂಡಿ’ ಯೂಟ್ಯೂಬ್ ಚಾನೆಲ್ ಮಾಲೀಕ ಗಂಗಾಧರ್ ಮೂಲಕ ವ್ಯವಹಾರ ಕುದುರಿಸಲು ಮುಂದಾಗಿದ್ದರು. ಗಂಗಾಧರ್ ಈ ಕೆಲಸ ಮಾಡಿಸಿಕೊಡಲು ಪದೇ ಪದೇ ಫೈಜುಲ್ಲಾಸಾಬ್ ಅವರಿಗೆ ಕಿರುಕುಳ ನೀಡುತ್ತಾ ಹಣಕ್ಕಾಗಿ ಒತ್ತಾಯಿಸುತ್ತಿದ್ದ.
ಲೋಕಾಯುಕ್ತರ ಖೆಡ್ಡಕ್ಕೆ ಬಿದ್ದಿದ್ದು ಹೇಗೆ?
ಯೂಟ್ಯೂಬರ್ ಗಂಗಾಧರ್ ಮತ್ತು ಪಿಡಿಓ ಅವರ ಕಿರುಕುಳಕ್ಕೆ ಬೇಸತ್ತ ಫೈಜುಲ್ಲಾಸಾಬ್, ಕೂಡಲೇ ಲೋಕಾಯುಕ್ತ ಅಧಿಕಾರಿಗಳ ಮೊರೆ ಹೋಗಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಫೈಜುಲ್ಲಾಸಾಬ್ ಅವರಿಂದ ಹಣ ಪಡೆಯುತ್ತಿದ್ದ ವೇಳೆ ಗಂಗಾಧರ್‌ನನ್ನು ಹಿಡಿದಿದ್ದಾರೆ.
ತನಿಖೆಯಲ್ಲಿ ಬಯಲಾದ ಅಚ್ಚರಿಯ ಸಂಗತಿಗಳು
ಲಕ್ಷಾಂತರ ರೂಪಾಯಿ ಆಸ್ತಿ : ಕೇವಲ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಗಂಗಾಧರ್, ಕಳೆದ ಒಂದು ವಾರದಲ್ಲಷ್ಟೇ ನೆಲಮಂಗಲದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಐಷಾರಾಮಿ ಮನೆಯನ್ನು ಖರೀದಿಸಿದ್ದ ಎನ್ನಲಾಗಿದೆ.
ಅಧಿಕಾರಿಗಳೊಂದಿಗೆ ನಂಟು : ಪಂಚಾಯಿತಿ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಈತ, ಜನಸಾಮಾನ್ಯರನ್ನು ಹೆದರಿಸಿ ಹಣ ವಸೂಲಿ ಮಾಡುವ ದಂಧೆಯಲ್ಲಿ ತೊಡಗಿದ್ದ ಎಂಬ ಆರೋಪ ಕೇಳಿಬಂದಿದೆ.
ಗೀತಾಮಣಿ ವಿರುದ್ಧ ತನಿಖೆ : ಗಂಗಾಧರ್ ಸಿಕ್ಕಿಬಿದ್ದ ಬೆನ್ನಲ್ಲೇ ಈತನಿಗೆ ಸೂಚನೆ ನೀಡಿದ್ದ ಪಿಡಿಓ ಗೀತಾಮಣಿ ಅವರ ವಿರುದ್ಧವೂ ಲೋಕಾಯುಕ್ತರು ತನಿಖೆ ಚುರುಕುಗೊಳಿಸಿದ್ದಾರೆ.





