ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಮಹಾದಾಸೋಹಕ್ಕೆ ಈಗ ‘ಮಿರ್ಚಿ’ಯ ಮೆರುಗು ಸಿಕ್ಕಿದೆ. ಪ್ರತಿವರ್ಷದಂತೆ ಈ ಬಾರಿಯೂ ಗವಿಸಿದ್ದೇಶ್ವರ ಅಜ್ಜನ ಜಾತ್ರೆಯ ಮರುದಿನ ಭಕ್ತರಿಗೆ ಬಿಸಿಬಿಸಿ ಮಿರ್ಚಿ ಬಜ್ಜಿಯನ್ನು ಪ್ರಸಾದವಾಗಿ ನೀಡುವ ಮೂಲಕ ಸಮಾನ ಮನಸ್ಕರ ಬಳಗವು ಗಮನ ಸೆಳೆದಿದೆ. ಸುಮಾರು 5 ರಿಂದ 6 ಲಕ್ಷ ಜನರಿಗೆ ಇಂದು ಮಿರ್ಚಿ ದಾಸೋಹ ನಡೆದಿದೆ.
ದಾಸೋಹದ ಅಂಕಿ-ಅಂಶ:
ಲಕ್ಷಾಂತರ ಜನರಿಗೆ ಮಿರ್ಚಿ ತಯಾರಿಸುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ ತಿಂಗಳುಗಳ ಮೊದಲೇ ಸಿದ್ಧತೆಗಳು ನಡೆಯುತ್ತವೆ. ಈ ಬಾರಿ ಬಳಸಲಾದ ಸಾಮಗ್ರಿಗಳ ವಿವರಗಳನ್ನ ನೋಡುವುದಾದರೆ, ಕಡಲೆ ಹಿಟ್ಟು-25 ಕ್ವಿಂಟಾಲ್, ಹಸಿ ಮೆಣಸಿನಕಾಯಿ-22 ಕ್ವಿಂಟಾಲ್, ಎಣ್ಣೆ-12 ಬ್ಯಾರೆಲ್ (ಶುದ್ಧ ಅಡುಗೆ ಎಣ್ಣೆ), ಇಂಧನ: 60 ಗ್ಯಾಸ್ ಸಿಲಿಂಡರ್‌ಗಳು, 75 ಕೆಜಿ ಉಪ್ಪು, 25 ಕೆಜಿ ಅಜವಾನ ಹಾಗೂ 25 ಕೆಜಿ ಸೋಡಾಪುಡಿಗಳನ್ನ ಬಳಸಲಾಗಿದೆ.
ಬೆಳಿಗ್ಗೆಯಿಂದಲೇ ಆರಂಭವಾದ ಈ ಕಾರ್ಯದಲ್ಲಿ 25ಕ್ಕೂ ಹೆಚ್ಚು ಗ್ರಾಮಗಳಿಂದ ಬಂದ ನೂರಾರು ಸ್ವಯಂಸೇವಕರು ಭಕ್ತಿಯಿಂದ ಭಾಗವಹಿಸಿದ್ದರು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಕೇವಲ ಅಜ್ಜನ ಸೇವೆಯ ಸಂಕಲ್ಪದೊಂದಿಗೆ ಕೈಜೋಡಿಸಿದ್ದು ಈ ದಾಸೋಹದ ವಿಶೇಷ.
11 ವರ್ಷಗಳ ನಿರಂತರ ಸೇವೆ
ಗವಿಮಠದ ದಾಸೋಹದಲ್ಲಿ ಮಿರ್ಚಿ ನೀಡುವ ಈ ಸಂಪ್ರದಾಯ ಇಂದಿನದಲ್ಲ. ಕಳೆದ 11 ವರ್ಷಗಳ ಹಿಂದೆ ಸಮಾನ ಮನಸ್ಕರ ಬಳಗವು ಸಣ್ಣ ಮಟ್ಟದಲ್ಲಿ ಈ ಸೇವೆಯನ್ನು ಆರಂಭಿಸಿತ್ತು. ಉತ್ತರ ಕರ್ನಾಟಕದ ಜನರಿಗೆ ‘ಮಿರ್ಚಿ-ಮಂಡಕ್ಕಿ’ ಎಂದರೆ ಪಂಚಪ್ರಾಣ. ಊಟದಲ್ಲಿ ಮಿರ್ಚಿ ಇಲ್ಲದಿದ್ದರೆ ಅದು ಅಪೂರ್ಣ ಎಂಬ ಭಾವನೆ ಜನರಲ್ಲಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಆರಂಭವಾದ ಈ ಸೇವೆ, ಇಂದು ಲಕ್ಷಾಂತರ ಜನರಿಗೆ ತಲುಪುತ್ತಿದೆ. ವಿಶೇಷವೆಂದರೆ, ಈ ತಂಡದ ಸದಸ್ಯರು ಯಾರಿಂದಲೂ ದೇಣಿಗೆ ಪಡೆಯದೆ ತಮ್ಮ ಸ್ವಂತ ಹಣವನ್ನು ಹಾಕಿ ಈ ದಾಸೋಹವನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಜಾತ್ರೆ ಮತ್ತು ದಾಸೋಹದ ಮಹಿಮೆ
ಗವಿಮಠದ ಜಾತ್ರೆ ಎಂದರೆ ಅದು ದಾಸೋಹಕ್ಕೆ ಮತ್ತೊಂದು ಹೆಸರು. ಜನವರಿ 1ರಿಂದಲೇ ದಾಸೋಹದ ಸಿದ್ಧತೆಗಳು ಅಧಿಕೃತವಾಗಿ ಚಾಲನೆ ಪಡೆದಿದ್ದು, ನಿರಂತರವಾಗಿ 20 ದಿನಗಳ ಕಾಲ ಇಲ್ಲಿ ಅನ್ನದಾಸೋಹ ನಡೆಯುತ್ತದೆ. ಈ ಬಾರಿ ಜಾತ್ರೆಯಲ್ಲಿ ಜನಸಾಗರವೇ ಹರಿದುಬಂದಿದ್ದು, ಪ್ರತಿಯೊಬ್ಬ ಭಕ್ತನಿಗೂ ಪ್ರಸಾದ ಸಿಗುವಂತೆ ಮಠದ ಆಡಳಿತ ಮಂಡಳಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದೆ. ಗವಿಸಿದ್ದೇಶ್ವರ ಅಜ್ಜನ ದರ್ಶನ ಪಡೆದ ಭಕ್ತರು, ಈ ಮಿರ್ಚಿಯನ್ನ ಸವಿದು ಸಂತಸ ವುಕ್ತಪಡಿಸಿದ್ದಾರೆ.





