ಕೊಡಗು : ದುಷ್ಕರ್ಮಿಗಳು ಎಂಟು ಪೊಲೀಸರ ಮನೆಗಳ ಬಾಗಿಲು ಒಡೆದು 95,000 ರೂ. ನಗದು ಮತ್ತು 5.5 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಮಡಿಕೇರಿಯ ಪೊಲೀಸ್ ವಸತಿಗೃಹದಲ್ಲಿ ನಡೆದಿದೆ. ಈ ಘಟನೆ ಜೂನ್ 17ರ ರಾತ್ರಿ ನಡೆದಿದ್ದು, ಪೊಲೀಸರು, ಜಿಗಣೆಯೊಂದರ ಸುಳಿವಿನಿಂದ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಮನೀಶ್ ಬಗೇಲ್ (27) ಮತ್ತು ಸುರೇಶ್ ಸೆಂಗರ್ (23) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಮಧ್ಯಪ್ರದೇಶದ ಧಾರ್ ಜಿಲ್ಲೆಯವರು. ಇನ್ನೊಬ್ಬ ಆರೋಪಿ ಪೂನಮ್‌ನ ಪತ್ತೆಗೆ ಶೋಧ ಮುಂದುವರಿದಿದೆ.
ಪೊಲೀಸ್ ವಸತಿಗೃಹದಲ್ಲಿ ನಡೆದ ಈ ದರೋಡೆಯು ಕೊಡಗು ಪೊಲೀಸರಿಗೆ ಸವಾಲಾಗಿತ್ತು.. ರಾತ್ರಿ 2 ರಿಂದ 4 ಗಂಟೆಯ ನಡುವೆ ಮೂವರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಕೃತ್ಯವೆಸಗಿದ್ದರು. ಆರಂಭದಲ್ಲಿ ಬೈಕ್‌ನ ನಂಬರ್ ಸುಳಿವಿನಿಂದ ತನಿಖೆ ಆರಂಭವಾಯಿತು. ಆದರೆ, ಆ ಬೈಕ್ ಕೂಡ ಗೋವಾದ ವ್ಯಕ್ತಿಯೊಬ್ಬರಿಂದ ಕದ್ದದ್ದೆಂದು ತಿಳಿದು ಬಂದಾಗ ತನಿಖೆಗೆ ತಿರುವು ಸಿಕ್ಕಿತ್ತು. 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು 700 ಕಿ.ಮೀ. ದೂರದವರೆಗೆ ಪರಿಶೀಲಿಸಿದ ಪೊಲೀಸರು, ಆರೋಪಿಗಳ ಚಿತ್ರಗಳನ್ನು ರಾಜ್ಯ ಮತ್ತು ಪಕ್ಕದ ರಾಜ್ಯಗಳ ಪೊಲೀಸ್ ಠಾಣೆಗಳಿಗೆ ಕಳುಹಿಸಿದರು.
ತನಿಖೆಯ ಸಂದರ್ಭದಲ್ಲಿ ಸಿಸಿಟಿವಿ ದೃಶ್ಯಗಳಲ್ಲಿ ಆರೋಪಿಗಳ ಮುಖ ಸ್ಪಷ್ಟವಾಗಿ ಗೋಚರಿಸಿರಲಿಲ್ಲ. ಆದರೆ, ಒಂದು ಜಿಗಣೆಯಿಂದ ಅನಿರೀಕ್ಷಿತ ಸುಳಿವು ದೊರೆಯಿತು. ಕಳ್ಳತನದ ಸಮಯದಲ್ಲಿ ಆರೋಪಿಗಳ ಕಾಲಿಗೆ ಜಿಗಣೆ ಕಚ್ಚಿತ್ತು. ಈ ಘಟನೆಯಿಂದ ಸಿಕ್ಕ ರಕ್ತದ ಮಾದರಿಯನ್ನು ಪರೀಕ್ಷಿಸಿದಾಗ, ಅದು ಮಧ್ಯಪ್ರದೇಶದ ಧಾರ್ ಜಿಲ್ಲೆಯ ನರ್ವಾಲಿ ಗ್ರಾಮದ ಸುರೇಶ್ ಸೆಂಗರ್ ಮತ್ತು ಮಾಲ್ಪುರ ಗ್ರಾಮದ ಮನೀಶ್ ಬಗೇಲ್‌ಗೆ ಸಂಬಂಧಿಸಿದ್ದು ಎಂದು ದೃಢಪಟ್ಟಿತ್ತು. ಇದರ ಜೊತೆಗೆ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪೂನಮ್ ಎಂಬ ಆರೋಪಿಯ ರಕ್ತದ ಮಾದರಿಯೂ ಜಿಗಣೆಯಿಂದ ಸಿಕ್ಕ ರಕ್ತಕ್ಕೆ ಹೊಂದಿಕೆಯಾಯಿತು.
ಕೊಡಗು ಪೊಲೀಸರ ತಂಡ, ಸಬ್-ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ, ಧಾರ್ ಜಿಲ್ಲೆಯಲ್ಲಿ ಒಂದು ತಿಂಗಳ ಕಾಲ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿತ್ತು. ಆಗಸ್ಟ್ 17ರಂದು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಮತ್ತೊಂದು ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಸುರೇಶ್ ಸೆಂಗರ್ ಮತ್ತು ಮನೀಶ್ ಬಗೇಲ್‌ರನ್ನು ಬಂಧಿಸಲಾಯಿತು. ಸುರೇಶ್ ಸೆಂಗರ್‌ಗೆ ರಾಜ್ಯದಾದ್ಯಂತ 25ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ. ವಶಪಡಿಸಿಕೊಂಡ ವಸ್ತುಗಳಲ್ಲಿ 50,480 ರೂ. ನಗದು, ಒಂಬತ್ತು ಮೊಬೈಲ್‌ಗಳು, ಕಬ್ಬಿಣದ ರಾಡ್ ಮತ್ತು ಬೋಲ್ಟ್ ಕಟ್ಟರ್ ಸೇರಿವೆ ಎಂದು ಕೊಡಗು ಎಸ್‌ಪಿ ಕೆ. ರಾಮರಾಜನ್ ವಿವರಿಸಿದ್ದಾರೆ.