ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಳ್ಳಿಯ ಟೋಲ್‌ನಾಕಾದಲ್ಲಿ ಪ್ರೇಮ ವೈಫಲ್ಯದಿಂದ ಮನನೊಂದ ಕಾಲೇಜು ವಿದ್ಯಾರ್ಥಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಜಿತೇಂದ್ರ ಜಗದೀಶ ಪಡ್ತಿ (20) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.
ಜಿತೇಂದ್ರ ತನ್ನ ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದು, ಇತ್ತೀಚೆಗೆ ಸಿಇಟಿ ಪರೀಕ್ಷೆಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಗಳಿಸಿದ್ದ. ಆತ ಕಾಲೇಜಿನಲ್ಲಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಗೆ ಪ್ರೇಮ ನಿವೇದನೆ ಮಾಡಿದ್ದ. ಆದರೆ, ಆ ಯುವತಿ ಆತನೊಂದಿಗೆ ಸ್ನೇಹದಲ್ಲಿ ಇದ್ದರೂ, ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಆಕೆ ತನ್ನ ಉನ್ನತ ಶಿಕ್ಷಣಕ್ಕಾಗಿ ಗೋವಾದಲ್ಲಿದ್ದಳು. ಜಿತೇಂದ್ರ ವಿವಿಧ ಸಂಖ್ಯೆಗಳಿಂದ ಆಕೆಗೆ ಕರೆ ಮಾಡಿ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದ. ಆದರೆ, ಆಕೆ ಸತತವಾಗಿ ಆತನ ಪ್ರಸ್ತಾಪವನ್ನು ತಿರಸ್ಕರಿಸಿದ್ದರಿಂದ, ಜಿತೇಂದ್ರ ಮನನೊಂದು ಆಕೆ ಮತ್ತು ಆಕೆಯ ಕುಟುಂಬದವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆಗೆ ಮುಂದಾಗಿದ್ದ.
ಮನೆಯವರು ಬೇರೆ ಕೆಲಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ, ಜಿತೇಂದ್ರ ಮನೆಯ ಎರಡೂ ಬದಿಯ ಬಾಗಿಲುಗಳನ್ನು ಲಾಕ್ ಮಾಡಿಕೊಂಡು ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿಯಿಟ್ಟುಕೊಂಡಿದ್ದ. ಮನೆಯಿಂದ ಬೆಂಕಿಯ ಹೊಗೆಯನ್ನು ಗಮನಿಸಿದ ಆತನ ಪೋಷಕರು ತಕ್ಷಣ ಆತನನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ, ಶೇ.35 ಕ್ಕಿಂತ ಹೆಚ್ಚು ದೇಹ ಸುಟ್ಟುಹೋಗಿದ್ದರಿಂದ, ಕಾರವಾರದ ಕ್ರಿಮ್ಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮತ್ತು ತನಿಖೆ ನಡೆಯುತ್ತಿದೆ.