ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಹಾಸನ, ಮಂಡ್ಯ, ದೇವನಹಳ್ಳಿ, ಬೆಳಗಾವಿ, ಮತ್ತು ಚಿಕ್ಕಬಳ್ಳಾಪುರದಲ್ಲಿ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ: ಇಬ್ಬರ ಸಾವು
ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದಿಂದ ಮೈಸೂರಿಗೆ ರಜನಿಕಾಂತ್ ಅವರ ‘ಕೂಲಿ’ ಸಿನಿಮಾ ವೀಕ್ಷಣೆಗೆ ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೊಣನೂರಿನ ದರ್ಶನ್ ಮತ್ತು ಕಬ್ಬಳಿಗೆರೆಯ ಪ್ರಸಾದ್ (22) ಎಂಬ ಯುವಕರು ಬೈಕ್‌ನಲ್ಲಿ ಬಸವಪಟ್ಟಣದ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಯುವಕರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಕಬ್ಬು ತುಂಬಿದ ಲಾರಿಗೆ ಬೈಕ್ ಡಿಕ್ಕಿ: ಯುವಕ ಸಾವು
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ಕುವೆಂಪು ವೃತ್ತದ ಬಳಿ ಕಬ್ಬು ತುಂಬಿದ ಲಾರಿಗೆ ಬೈಕ್ ಡಿಕ್ಕಿಯಾಗಿ ಚಂದ್ರಶೇಖರ್ (26) ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಚಂದ್ರಶೇಖರ್ ಪಾಂಡವಪುರ ಪಟ್ಟಣದ ಗಾರ್ಮೆಂಟ್ ಕಾರ್ಖಾನೆಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವನಹಳ್ಳಿ ಏರ್‌ಪೋರ್ಟ್‌ನಲ್ಲಿ ಟಿಟಿ ವಾಹನ ಪಲ್ಟಿ: 7 ಜನರಿಗೆ ಗಾಯ
ಬೆಂಗಳೂರು ಗ್ರಾಮಾಂತರ: ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಮುಂಭಾಗದಲ್ಲಿ ಏರ್‌ಪೋರ್ಟ್ ಸಿಬ್ಬಂದಿಯನ್ನು ಕರೆತರುತ್ತಿದ್ದ ಟಿಟಿ ವಾಹನವೊಂದು ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬೆಳಗಿನ ಶಿಫ್ಟ್‌ಗೆ ಸಿಬ್ಬಂದಿಯನ್ನು ಕರೆತರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ವಾಹನದಲ್ಲಿದ್ದ ಏಳು ಜನ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಕೂಟರ್-ಗೂಡ್ಸ್‌ವಾಹನ ಮಧ್ಯೆ ಭೀಕರ ಡಿಕ್ಕಿ: ವಾಹನ ಸವಾರರು ಸ್ಥಳದಲ್ಲೇ ಸಾವು, ಹಲವರಿಗೆ ಗಾಯ!
ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರ ಘಾಟದ ಬಳಿ ಶಿವನ ಮೂರ್ತಿಯ ಎದುರು ಗೂಡ್ಸ್ ವಾಹನವೊಂದು ನಿಯಂತ್ರಣ ತಪ್ಪಿ ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ರಾಮದುರ್ಗ ಪಟ್ಟಣದ ಶಿವಲಿಂಗ ದೇವಸ್ಥಾನದ ಮುಖ್ಯ ಅರ್ಚಕ ವಿಜಯಕುಮಾರ್ ಘೋಡಬೋಲೆ (55) ಮತ್ತು ಗೂಡ್ಸ್ ವಾಹನದ ಚಾಲಕ, ಕಲಬುರಗಿ ಮೂಲದ ಅನಿಲ್ ರಮೇಶ ಬಿರಾದಾರ (23) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಡಿಕ್ಕಿಯ ರಭಸಕ್ಕೆ ವಾಹನ ಪಲ್ಟಿಯಾಗಿ, ನಾಲ್ವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ರಾಮದುರ್ಗ ಡಿವೈಎಸ್ಪಿ ಚಿದಂಬರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಶಾಲಾ ಬಸ್ ಪಲ್ಟಿ: 17 ಮಕ್ಕಳಿಗೆ ಗಾಯ
ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕಿನ ಮ್ಯಾಕಲಹಳ್ಳಿ-ಸೀತಪ್ಪಲ್ಲಿ ಮಾರ್ಗದಲ್ಲಿ ಶಾಲಾ ಬಸ್‌ವೊಂದು ಎದುರಿಗೆ ಬಂದ ವಾಹನವನ್ನು ತಪ್ಪಿಸಲು ಯತ್ನಿಸುವ ವೇಳೆ ಗುಂಡಿಗೆ ಬಿದ್ದು, ಜಮೀನಿನೊಳಗೆ ಹಾರಿ ಪಲ್ಟಿಯಾಗಿದೆ. ಮಂಡಿಕಲ್ಲು ಗ್ರಾಮದ ರಾಮಯ್ಯ ಶಾಲೆಗೆ ಸೇರಿದ ಈ ಬಸ್‌ನಲ್ಲಿ 17 ಮಕ್ಕಳು ಗಾಯಗೊಂಡಿದ್ದು, ಅವರನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂತಿದ್ದ ಕಾರಿಗೆ ಆಟೋ ಡಿಕ್ಕಿ: ಆಟೋದಲ್ಲಿದ್ದ ವೃದ್ಧೆಯ ಸ್ಥಿತಿ ಗಂಭೀರ!
ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಂಡಲಿಕನಹಳ್ಳಿ ಬಳಿ ತಿರುವಿನ ರಸ್ತೆಯಲ್ಲಿ ನಿಂತಿದ್ದ ಕಾರಿಗೆ ಆಟೋ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆಯ ಕೈ-ಕಾಲು ಮುರಿದು ಗಂಭೀರ ಸ್ಥಿತಿಯಲ್ಲಿದ್ದಾಳೆ. ಇಬ್ಬರು ಮಕ್ಕಳು ಸೇರಿದಂತೆ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಚನ್ನರಾಯಪಟ್ಟಣದ ಆಸ್ಪತ್ರೆಗೆ ರವಾನಿಸಲಾಗಿದೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.