ತುಮಕೂರು, ಮಾ.29: “ನನ್ನ ಮೇಲೆ ಕೊಲೆ ಯತ್ನ ನಡೆದಿದೆ” ಎಂದು ಆರೋಪಿಸಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ಹಾಗೂ ತುಮಕೂರು ಸಿತ್ತನಕೋಟೆ ಕ್ಷೇತ್ರದ ಶಾಸಕ ರಾಜೇಂದ್ರ, ಈ ಸಂಬಂಧ ಮಹತ್ವದ ದಾಖಲೆಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಪೊಲೀಸ್ ಮಹಾನಿರ್ದೇಶಕರನ್ನು (ಡಿಜಿಪಿ) ಭೇಟಿಯಾಗಿ ದೂರು ಸಲ್ಲಿಸಿದ್ದ ರಾಜೇಂದ್ರ, ಅವರ ಸೂಚನೆಯಂತೆ ಶುಕ್ರವಾರ ತುಮಕೂರು ಎಸ್ಪಿ ಅಶೋಕ್ ಕೆ.ವಿ. ಅವರಿಗೆ ಪೆನ್‌ಡ್ರೈವ್ ಯೊಂದಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನ.16ರಂದು ನನ್ನ ಮಗಳ ಹುಟ್ಟುಹಬ್ಬದಂದು ನನ್ನ ಕೊಲೆಗೆ ಯತ್ನಿಸಿಲಾಗಿದೆ. ಈ ಯೋಜನೆಯ ಬಗ್ಗೆ ನನಗೆ ಜನವರಿಯಲ್ಲಿ ಮಾಹಿತಿ ದೊರೆಯಿತು. ಇದಕ್ಕೆ ಸಂಬಂಧಿಸಿ ಒಂದು ಹುಡುಗಿಯು ಹುಡುಗನ ಜೊತೆ ಮಾತನಾಡುವ 18 ನಿಮಿಷದ ಆಡಿಯೋ ಇದೆ. ಆ ಆಡಿಯೋದಲ್ಲಿ ‘ಸೋಮ’ ಮತ್ತು ‘ಭರತ್’ ಎಂಬ ಎರಡು ಹೆಸರುಗಳು ಕೇಳಿ ಬಂದಿದೆ” ಎಂದು ವಿವರಿಸಿದರು.
“ಅವರಿಬ್ಬರು ಯಾರು ಎಂಬುದು ನನಗೆ ತಿಳಿದಿಲ್ಲ. ಆ ಆಡಿಯೋದಲ್ಲಿರುವ ವಿವರಗಳ ಪ್ರಕಾರ, ನನ್ನ ಕೊಲೆಗಾಗಿ ₹70 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು. ಅದರಲ್ಲಿ ₹5 ಲಕ್ಷ ರೂಪಾಯಿ ಪಾವತಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಈ ಕುರಿತು ಪೆನ್‌ಡ್ರೈವ್‌ನಲ್ಲಿ ದಾಖಲೆಗಳಿವೆ. ನನ್ನ ಭದ್ರತೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಿ ದೂರು ಸಲ್ಲಿಸಿದ್ದೇನೆ,” ಎಂದರು.
ನನ್ನ ಕೊಲೆಗೆ ಯತ್ನ
“ನ.16ರಂದು ನನ್ನ ಮಗಳ ಹುಟ್ಟುಹಬ್ಬದ ದಿನ, ನಮ್ಮ ಮನೆಯ ಮುಂಭಾಗ ಶಾಮಿಯಾನ ಹಾಕುವ ನೆಪದಲ್ಲಿ ಕೆಲವರು ಬಂದು ಸ್ಥಳ ಪರಿಶೀಲನೆ ನಡೆಸಿದ್ದರು. ಅವರ ಉದ್ದೇಶ ಶಾಮಿಯಾನ ಹಾಕುವುದು ಅಲ್ಲ, ನನ್ನ ಮೇಲೆ ದಾಳಿ ನಡೆಸುವುದೇ ಆಗಿತ್ತು. ಆದರೆ, ಅದೇ ದಿನ ಯಾವುದೇ ಕೃತ್ಯ ನಡೆಯಲಿಲ್ಲ. ಜನವರಿಯಲ್ಲಿ ಆಡಿಯೋ ಸಿಕ್ಕ ನಂತರ ಈ ಬಗ್ಗೆ ನನಗೆ ಗೊತ್ತಾಯಿತು. ಮೊದಲಿಗೆ ತಮಾಷೆ ಎಂದಿದ್ದೆ, ಆದರೆ ವಿಷಯ ಗಂಭೀರವೆಂದು ಸ್ಪಷ್ಟವಾಗಿದ ದೂರು ನೀಡಿದೆ,” ಎಂದು ರಾಜೇಂದ್ರ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ತುಮಕೂರು ಎಸ್ಪಿ ಅಶೋಕ್ ಕೆ.ವಿ., “ಶಾಸಕ ರಾಜೇಂದ್ರ ಅವರು ನೀಡಿದ ದೂರನ್ನು ನಾವು ಸ್ವೀಕರಿಸಿದ್ದೇವೆ. ಕ್ಯಾತಸಂದ್ರ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಪೆನ್‌ಡ್ರೈವ್‌ನಲ್ಲಿ ನೀಡಿರುವ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಆಡಿಯೋದಲ್ಲಿ ‘ಭರತ್’ ಮತ್ತು ‘ಸೋಮ’ ಎಂಬ ಹೆಸರುಗಳು ಕೇಳಿಬರುತ್ತವೆ. ಸೋಮ ಅವರು ತುಮಕೂರು ನಗರ ಠಾಣೆಯ ರೌಡಿಶೀಟರ್ ಆಗಿದ್ದು, ಹಿಂದೆ ಜೈಲಿಗೆ ಕಳುಹಿಸಲಾಗಿತ್ತು. ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ,” ಎಂದು ತಿಳಿಸಿದರು.
ಹನಿಟ್ರ್ಯಾಪ್ ಆರೋಪಕ್ಕೆ ಸ್ಪಷ್ಟನೆ
ಹನಿಟ್ರ್ಯಾಪ್ ಆರೋಪಕ್ಕೂ ಸಂಬಂಧಿಸಿದಂತೆ ಮಾತನಾಡಿದ ರಾಜೇಂದ್ರ, “ನನ್ನ ಮೇಲೆ ಹನಿಟ್ರ್ಯಾಪ್ ನಡೆಸಲಾಗಿದೆ ಎಂಬುದು ಸುಳ್ಳು. ಆದರೆ ನನ್ನ ಹತ್ಯೆಗೆ ಯತ್ನವಾಗಿದೆ ಎಂಬುದು ಸತ್ಯ. ಈ ವಿಷಯವನ್ನು ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಮುಖ್ಯಮಂತ್ರಿಯವರು ಡಿಜಿಪಿಗೆ ಸೂಕ್ತ ದಾಖಲೆಗಳೊಂದಿಗೆ ದೂರು ಸಲ್ಲಿಸುವಂತೆ ಸೂಚಿಸಿದರು. ಡಿಜಿಪಿಯವರು ತುಮಕೂರಿನಲ್ಲಿ ಘಟನೆ ನಡೆದಿರುವುದರಿಂದ ಜಿಲ್ಲಾಧಿಕಾರಿಗೆ ದೂರು ನೀಡುವಂತೆ ಹೇಳಿದ್ದಾರೆ. ಅದನ್ನು ಇಂದು ನಾನು ಸಲ್ಲಿಸಿದ್ದೇನೆ,” ಎಂದು ವಿವರಿಸಿದರು.
ಪೊಲೀಸರು ತನಿಖೆ
ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಎಸ್‌ಪಿ, “ಪೆನ್‌ಡ್ರೈವ್‌ನಲ್ಲಿ ಇರುವ ಆಡಿಯೋ ಮತ್ತು ಇತರ ಮಾಹಿತಿಯನ್ನು ತಜ್ಞರ ಮೂಲಕ ಪರಿಶೀಲನೆ ನಡೆಸಲಾಗುತ್ತದೆ. ಇದರಲ್ಲಿ ಅಪರಾಧ ಸಂಬಂಧಿ ಆಧಾರಗಳಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಆರೋಪಿಗಳ ಹಿನ್ನೆಲೆ, ಹಣದ ವರ್ಗಾವಣೆ ಹಾಗೂ ಸಂಚು ಹಿಂದೆ ಇತರರು ಇದ್ದಾರೆ ಎಂಬುದು ತನಿಖೆ ಮುಂದುವರಿಸಲಾಗುತ್ತದೆ,” ಎಂದು ಹೇಳಿದರು.





