ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಹೈಕಮಾಂಡ್ ನೇರ ಸೂಚನೆಯ ಮೇರೆಗೆ ನಡೆದಿದೆ ಎಂದು ತಿಳಿದುಬಂದಿದೆ. ರಾಜಣ್ಣ ಅವರು ಇತ್ತೀಚೆಗೆ ಕೊಟ್ಟ ವಿವಾದಾತ್ಮಕ ಹೇಳಿಕೆಗಳು ಮತ್ತು ಪಕ್ಷದ ವಿರುದ್ಧದ ಟೀಕೆಗಳು ಈ ನಿರ್ಧಾರಕ್ಕೆ ಕಾರಣವಾಗಿವೆ.
ರಾಜಣ್ಣ ಅವರು ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ, “ನಮ್ಮ ಸರ್ಕಾರವಿದ್ದಾಗಲೇ ಮತದಾರರ ಪಟ್ಟಿ ಮಾಡಲಾಗಿತ್ತು. ಆಗ ನಮ್ಮವರು ಕಣ್ಣು ಮುಚ್ಚಿಕೊಂಡು ಕುಳಿತಿದ್ದರಾ?” ಎಂದು ಪ್ರಶ್ನಿಸಿದ್ದರು. ಈ ಹೇಳಿಕೆಯು ಕಾಂಗ್ರೆಸ್ ಪಕ್ಷದ ನಾಯಕರನ್ನು ಕೋಪಗೊಳಿಸಿತ್ತು. ಇದು ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ಮಾಡಿದ ಮತಗಳ್ಳತನ ಆರೋಪಗಳಿಗೆ ವಿರುದ್ಧವಾಗಿ ನಿಂತಂತೆ ಕಂಡುಬಂದಿತ್ತು.
ರಾಜಣ್ಣ ಅವರ ಹೇಳಿಕೆಗಳು ದಿಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ಗಮನಕ್ಕೆ ಬಂದ ನಂತರ, ಅವರನ್ನು ಸಚಿವ ಸ್ಥಾನಕ್ಕೆ ಕೊಕ್ ಮಾಡಲಾಗಿದೆ. ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ರಾಜೀನಾಮೆಗೆ ಒತ್ತಾಯಿಸಲಾಯಿತು. ರಾಜಣ್ಣ ಅವರು ಈ ನಿರ್ಧಾರವನ್ನು ಸ್ವೀಕರಿಸಿ, ಸೋಮವಾರ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.