ಬೆಳಗಾವಿ: ಎಲ್ಲಾ ಧರ್ಮಗಳ, ಎಲ್ಲಾ ಜಾತಿಗಳ ಬಡವರಿಗೆ ಶಿಕ್ಷಣದ ಅವಕಾಶ ಸಿಗಬೇಕು ಮತ್ತು ಅವರಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಶಕ್ತಿಯನ್ನು ತುಂಬಬೇಕು. ಇದು ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಇಂದು ಬೆಳಗಾವಿಯ ಸಾಂಭ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಾಮಾಜಿಕ-ಆರ್ಥಿಕ ಸಮೀಕ್ಷೆ ಬಗ್ಗೆ ವಿರೋಧ ಪಕ್ಷದ ಆರೋಪಕ್ಕೆ ತಿರುಗೇಟು
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಮೂಲ ಪ್ರತಿ ಮುಖ್ಯಮಂತ್ರಿಗಳ ಬಳಿಯಿದೆ ಎಂದು ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಆರ್. ಅಶೋಕ್ ಅವರು ಯಾವತ್ತಾದರೂ ಸತ್ಯವನ್ನು ಹೇಳಿದ್ದಾರೆಯೇ? ಅವರು ಸುಳ್ಳು ಹೇಳುವುದೇ ಕೆಲಸ. ಮೂಲ ಪ್ರತಿ ನನ್ನ ಬಳಿಯಿರಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿಯವರಿಗೆ ಯಾವುದೇ ಪತ್ರ ಬರೆದಿಲ್ಲ, ಆದರೆ ಅವರೊಂದಿಗೆ ಚರ್ಚಿಸಿ ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಯ ವರದಿಯನ್ನು ಮಂಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಜಾತಿಗಣತಿ: ಸಚಿವರ ಅಭಿಪ್ರಾಯದ ನಂತರ ಅಂತಿಮ ತೀರ್ಮಾನ
ಕಾಂಗ್ರೆಸ್ ಶಾಸಕರೇ ಜಾತಿಗಣತಿ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, “ಸಚಿವ ಸಂಪುಟ ಸಭೆಯಲ್ಲಿ ಯಾರೂ ಈ ವಿಷಯದ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ ಅಥವಾ ಜೋರಾಗಿ ಮಾತನಾಡಿಲ್ಲ. ಸಮೀಕ್ಷೆಯ ವರದಿಯನ್ನು ಓದಿಕೊಂಡು ಅಭಿಪ್ರಾಯಗಳನ್ನು ತಿಳಿಸುವಂತೆ ಸಚಿವರಿಗೆ ಸೂಚಿಸಲಾಗಿದೆ. ಸಚಿವರು ತಮ್ಮ ಅಭಿಪ್ರಾಯಗಳನ್ನು ನೀಡಿದ ಬಳಿಕ, ಮತ್ತೊಮ್ಮೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು” ಎಂದರು.
ಯಾವ ಜಾತಿಗೂ ಅನ್ಯಾಯವಾಗಬಾರದು
“ಯಾವ ಜಾತಿಗೂ ಅನ್ಯಾಯವಾಗಬಾರದು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಇದು ಕೇವಲ ಜಾತಿಗಣತಿಯಲ್ಲ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಾಗಿದೆ. ಸಂವಿಧಾನ ಜಾರಿಯಾಗಿ 75 ವರ್ಷಗಳಾದರೂ ಬಡವರು ಬಡವರಾಗಿಯೇ ಉಳಿಯಬೇಕೆ? ಸಮಾನತೆಯ ಅಗತ್ಯವಿಲ್ಲವೇ? ಜಾತಿಗೆ ಅಂಟಿಕೊಂಡೇ ಇರಬೇಕೆ?” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಸರ್ಕಾರದ ಈ ನೀತಿಯು ಸಮಾಜದ ಎಲ್ಲಾ ವರ್ಗಗಳ ಬಡವರ ಉದ್ಧಾರಕ್ಕೆ ಶಕ್ತಿ ತುಂಬುವ ಗುರಿಯನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು.





