ಕಲಬುರಗಿ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಳ್ಳಿ ವಿರಕ್ತ ಮಠದ ಮಠಾಧೀಪತಿಯಾಗಿದ್ದ ನಿಜಲಿಂಗ ಸ್ವಾಮೀಜಿ ಎಂಬಾತ ಮುಸ್ಲಿಂ ವ್ಯಕ್ತಿ ಎಂದು ಗ್ರಾಮಸ್ಥರು ಆರೋಪಿಸಿ ಪೀಠದಿಂದ ಕೆಳಗಿಳಿಸಿದ್ದು ಈಗ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಆದರೆ, ಈ ಪ್ರಕರಣದ ಹಿಂದಿನ ಕಥೆಯು ಇನ್ನಷ್ಟು ರೋಚಕತೆಯನ್ನು ಬಿಚ್ಚಿಡುತ್ತಿದೆ. ನಿಜಲಿಂಗ ಸ್ವಾಮೀಜಿ ಎಂದು ಕರೆಯಲ್ಪಡುವ ವ್ಯಕ್ತಿಯ ಪೂರ್ವಾಶ್ರಮದ ಹೆಸರು ಮೊಹ್ಮದ್ ನಿಸಾರ್ ಎಂದು ಬಹಿರಂಗವಾಗಿದ್ದು, ಇವರ ತಾಯಿ ರೆಹನಾ ಬೇಗಂ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಮೊಹ್ಮದ್ ನಿಸಾರ್‌ನ ಹಿನ್ನೆಲೆ:
ನಿಜಲಿಂಗ ಸ್ವಾಮೀಜಿಯ ಹುಟ್ಟೂರು ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಾಜಾಪೂರ ಗ್ರಾಮವಾಗಿದೆ. ಇವರು ಮೆಹಬೂಬ್ ಸಾಬ್ ಮತ್ತು ರೆಹನಾ ಬೇಗಂ ದಂಪತಿಗಳ ಪುತ್ರರಾಗಿದ್ದು, ಪೂರ್ವಾಶ್ರಮದಲ್ಲಿ ಮೊಹ್ಮದ್ ನಿಸಾರ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದರು. ರಾಜಾಪೂರ ಗ್ರಾಮದಲ್ಲಿ ಉರ್ದು ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಿಸಾರ್, ಲಿಂಗ ಪೂಜೆಯ ಕಡೆಗೆ ಒಲವು ತೋರಿದ್ದರು. ಆದರೆ, ಮುಸ್ಲಿಂ ಧರ್ಮವನ್ನು ಪಾಲಿಸುವ ಕುಟುಂಬದಲ್ಲಿ ಲಿಂಗ ಪೂಜೆಯನ್ನು ವಿರೋಧಿಸಲಾಗಿತ್ತು. ಇದರಿಂದ ಬೇಸರಗೊಂಡ ನಿಸಾರ್, 8ನೇ ತರಗತಿಯಲ್ಲಿದ್ದಾಗ ಮನೆಯನ್ನು ತೊರೆದು ಹೋಗಿದ್ದರು ಎಂದು ತಾಯಿ ರೆಹನಾ ಬೇಗಂ ಹೇಳಿಕೊಂಡಿದ್ದಾರೆ.
ಮೊಹ್ಮದ್ ನಿಸಾರ್ ತಾಯಿ ಹೇಳಿದ್ದೇನು?
ರೆಹನಾ ಬೇಗಂ ಅವರು ತಮ್ಮ ಮಗನ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನನ್ನ ಗಂಡನ ಸಾವಿನ ಸಂದರ್ಭದಲ್ಲೂ, ಮಗಳ ಮದುವೆಯ ಸಮಯದಲ್ಲೂ ನಿಸಾರ್ ಮನೆಗೆ ಬರಲಿಲ್ಲ. ಬಸವಕಲ್ಯಾಣದಲ್ಲಿ ಕಾವಿ ತೊಟ್ಟಿರುವುದಾಗಿ ಇತರರಿಂದ ತಿಳಿಯಿತು. ಅವನು ಮುಸ್ಲಿಂ ಧರ್ಮವನ್ನು ತೊರೆದು ಬೇರೆ ಧರ್ಮದ ದಾರಿಯನ್ನು ಹಿಡಿದಿದ್ದಾನೆ. ಈಗಲೂ ಅವನನ್ನು ಮನೆಗೆ ಸ್ವೀಕರಿಸಲಾರೆ. ನಾನು ಒಪ್ಪಿದರೂ ನಮ್ಮ ಸಮುದಾಯ ಒಪ್ಪುವುದಿಲ್ಲ,” ಎಂದು ರೆಹನಾ ಬೇಗಂ ಗಂಭೀರವಾಗಿ ಹೇಳಿದ್ದಾರೆ. “ನನ್ನ ಪಾಲಿಗೆ ನನ್ನ ಮಗ ಈಗ ಸತ್ತಂತೆ,” ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.