ಸಣ್ಣ ಕಾರಣಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ಹೋಗಿ, ನಡುರಸ್ತೆಯಲ್ಲೇ ಇಬ್ಬರು ಸಹೋದರರ ಮೇಲೆ ದೊಣ್ಣೆ ಮತ್ತು ಕಟ್ಟಿಗೆಗಳಿಂದ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ ನಡೆದಿದೆ. ರಸ್ತೆಯಲ್ಲಿ ಅಡ್ಡಲಾಗಿ ನಿಂತಿದ್ದ ಆಟೋವನ್ನು ಪಕ್ಕಕ್ಕೆ ಸರಿಸುವಂತೆ ಹೇಳಿದ್ದೇ ಈ ಮಾರಾಮಾರಿಗೆ ಕಾರಣವಾಗಿದೆ.
ಘಟನೆಯ ವಿವರ :
ಭೀಮಳ್ಳಿ ಗ್ರಾಮದ ನಿವಾಸಿಗಳಾದ ತೋಟೆಂದ್ರ ಮತ್ತು ಸುನೀಲ್ ಎಂಬ ಸಹೋದರರು ಈ ಹಲ್ಲೆಯಲ್ಲಿ ಗಾಯಗೊಂಡಿದ್ದಾರೆ. ತೋಟೆಂದ್ರ ಅವರು ತಮ್ಮ ಸಹೋದರಿಯ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಕಾರ್‌ನಲ್ಲಿ ವಾಪಸ್ ಬರುತ್ತಿದ್ದಾಗ, ರಸ್ತೆಯ ಮಧ್ಯದಲ್ಲಿ ಆಟೋವೊಂದನ್ನು ನಿಲ್ಲಿಸಲಾಗಿತ್ತು. ಕಾರ್ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಕಾರಣ, ಆಟೋವನ್ನು ಪಕ್ಕಕ್ಕೆ ನಿಲ್ಲಿಸುವಂತೆ ತೋಟೆಂದ್ರ ಸೂಚಿಸಿದ್ದಾರೆ.
ಆಟೋ ಪಕ್ಕಕ್ಕೆ ಸರಿಸುವಂತೆ ಹೇಳಿದ್ದನ್ನೇ ನೆಪವಾಗಿಟ್ಟುಕೊಂಡ ಕಿಡಿಗೇಡಿಗಳು, ತೋಟೆಂದ್ರ ಮತ್ತು ಅವರ ಸಹೋದರ ಸುನೀಲ್ ಮೇಲೆ ಮುಗಿಬಿದ್ದಿದ್ದಾರೆ. ರಸ್ತೆಯಲ್ಲೇ ಸಿಕ್ಕ ಸಿಕ್ಕ ಕಟ್ಟಿಗೆ ಮತ್ತು ದೊಣ್ಣೆಗಳಿಂದ ಇಬ್ಬರನ್ನೂ ಮನಸೋ ಇಚ್ಛೆ ಥಳಿಸಿದ್ದಾರೆ. ಸಾರ್ವಜನಿಕರ ಮುಂದೆಯೇ ನಡೆದ ಈ ಮಾರಾಮಾರಿಯಿಂದ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಗಾಯಗೊಂಡ ಸಹೋದರರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





