ಬೆಂಗಳೂರು: ವರ್ಗಾವಣೆಗೆ ಆಸೆಗೆ ಬಿದ್ದ ಆದಾಯ ತೆರಿಗೆ ಇಲಾಖೆಯ (IT) ಅಧಿಕಾರಿಯೊಬ್ಬರು, ಗಿಳಿಶಾಸ್ತ್ರ ಹೇಳುವವನನ್ನು ನಂಬಿ ಬರೋಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಐಟಿ ಇಲಾಖೆಯ ಕಚೇರಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರಿಗೆ ಕಳೆದ ಡಿಸೆಂಬರ್‌ನಲ್ಲಿ ಈ ವಂಚಕನ ಪರಿಚಯವಾಗಿತ್ತು. ಭಾರತಿನಗರದ ಶ್ರೀ ಸರ್ಕಲ್ ಬಳಿ ರಸ್ತೆಯಲ್ಲಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬಾತ, ಅಧಿಕಾರಿಯ ಮುಖ ನೋಡಿ ನಿಮ್ಮ ಜಾತಕದಲ್ಲಿ ದೋಷವಿದೆ, ಅದನ್ನು ಸರಿಪಡಿಸಿದರೆ ದೊಡ್ಡ ಮಟ್ಟದ ಅಭಿವೃದ್ಧಿ ಕಾಣುತ್ತೀರಿ ಎಂದು ನಂಬಿಸಿದ್ದ. ಇವನ ಮಾತಿನ ಮೋಡಿಗೆ ಒಳಗಾದ ಅಧಿಕಾರಿ, ಭವಿಷ್ಯ ಕೇಳಲು ಆರಂಭಿಸಿದ್ದರು.
ಹಂತ ಹಂತವಾಗಿ ನಡೆದ ವಂಚನೆ
ಮೊದಲಿಗೆ ಜೀವನದಲ್ಲಿ ಏಳಿಗೆಯಾಗಲು ವಿಶೇಷ ಪೂಜೆ ಮಾಡಬೇಕು ಎಂದು ಹೇಳಿದ ಶೇಖರ್, ಆರಂಭದಲ್ಲಿ ಪೂಜೆಯ ನೆಪದಲ್ಲಿ ಅಧಿಕಾರಿಯಿಂದ 50 ಸಾವಿರ ರೂಪಾಯಿ ಪಡೆದಿದ್ದ. ಬಳಿಕ ಅಧಿಕಾರಿ ತನ್ನ ವರ್ಗಾವಣೆಯ ಬಗ್ಗೆ ವಿಚಾರಿಸಿದಾಗ, ಇದಕ್ಕೆ ದೊಡ್ಡ ಮಟ್ಟದ ಹೋಮ-ಹವನ ಬೇಕು. ಇದು ಸಫಲವಾಗಬೇಕಾದರೆ ನಿಮ್ಮ ಮನೆಯಲ್ಲಿರುವ ಎಲ್ಲಾ ಚಿನ್ನದ ಒಡವೆಗಳನ್ನು ಪೂಜೆಗೆ ಇಡಬೇಕು ಎಂದು ಹೇಳಿದ್ದ. ಈ ತನ ಜಾಲಕ್ಕೆ ಬಿದ್ದ ಅಧಿಕಾರಿ ವಂಚಕನ ಮಾತು ನಂಬಿದ ಅಧಿಕಾರಿ, ಮನೆಯಲ್ಲಿದ್ದ 194 ಗ್ರಾಂ ಚಿನ್ನಾಭರಣ ಮತ್ತು ಸುಮಾರು 1 ಕೆಜಿ 300 ಗ್ರಾಂ ಬೆಳ್ಳಿಯ ವಸ್ತುಗಳನ್ನು (ಒಟ್ಟು ಮೌಲ್ಯ 35 ಲಕ್ಷ ರೂ.) ತಂದು ಶೇಖರ್ ಕೈಗಿಟ್ಟಿದ್ದರು.
ಚಿನ್ನಾಭರಣ ಹೊತ್ತು ಎಸ್ಕೇಪ್!
ಪೂಜೆ ಮುಗಿದ ಒಂದು ದಿನದಲ್ಲೇ ಒಡವೆಗಳನ್ನು ವಾಪಸ್ ನೀಡುತ್ತೇನೆ ಎಂದು ಹೇಳಿದ್ದ ಶೇಖರ್, ನಂತರ ಒಂದು ವಾರಗಳ ಕಾಲ ಪೂಜೆ ಇನ್ನೂ ಮುಗಿದಿಲ್ಲ, ಅಡ್ಡಿಗಳು ಬರುತ್ತಿವೆ ಎಂದು ಹೇಳಿ ಕಾಲಹರಣ ಮಾಡಿದ್ದ. ಅನುಮಾನಗೊಂಡ ಐಟಿ ಅಧಿಕಾರಿ ಭಾರತಿನಗರದ ಶ್ರೀ ಸರ್ಕಲ್ ಬಳಿ ಹೋಗಿ ನೋಡಿದಾಗ ಅಲ್ಲಿ ಶೇಖರ್ ಪತ್ತೆಯಿಲ್ಲ, ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಆಹ ಅಧಿಕಾರಿಗೆ ತಾನು ಮೋಸ ಹೋಗಿರುವುದಾಗಿ ತಿಲಿದುಬಂದಿದೆ. ಕೂಡಲೇ ಅಧಿಕಾರಿ ಪೊಲೀಸರ ಮೊರೆ ಹೋಗಿ ನಕಲಿ ಸ್ವಾಮಿಜೀ ವಿರುದ್ದ ದೂರು ದಾಖಲಿಸಿದ್ದಾರೆ.
ಪೊಲೀಸ್ ತನಿಖೆ
ಭಾರತಿನಗರ ಪೊಲೀಸರು ಐಟಿ ಅಧಿಕಾರಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಗಿಳಿಶಾಸ್ತ್ರದವ ಶೇಖರ್ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ. ನಗರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.




