ಗದಗ: ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿದ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಜಪ್ತಿ ಮಾಡಲು ಸಂಬಂಧಿಸಿದ ‘ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧ ಉತ್ಪತ್ತಿಗಳಿಂದಾದ ಸ್ವತ್ತು ವಶಪಡಿಕೆ ಮತ್ತು ವಸೂಲಾತಿ ಆಯುಕ್ತರ ನೇಮಕಾತಿ ಅಧಿನಿಯಮ’ಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದು, ನಿನ್ನೆ(ಸೆಪ್ಟೆಂಬರ್ 9)ಯಿಂದಲೇ ಈ ಕಾನೂನು ಜಾರಿಗೆ ಬಂದಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಗದಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಕರ್ನಾಟಕದಲ್ಲಿ ಗುತ್ತಿಗೆದಾರರು, ಸಾಗಾಣಿಕೆದಾರರು, ರಫ್ತುದಾರರು, ದಾಸ್ತಾನುಧಾರಕರು, ಖರೀದಿದಾರರು ಮತ್ತು ಮಧ್ಯವರ್ತಿಗಳು ಸೇರಿದಂತೆ ಅಕ್ರಮ ಗಣಿಗಾರಿಕೆಯ ಚಟುವಟಿಕೆಗಳಿಂದ ಸಂಘಟಿತ ಅಪರಾಧ ಮತ್ತು ವ್ಯವಸ್ಥಿತ ಒಳಸಂಚುಗಳಿಂದ ಸಂಪಾದಿತ ಆಸ್ತಿಗಳನ್ನು ಗುರುತಿಸಿ, ವಶಪಡಿಸಿಕೊಳ್ಳಲು ಮತ್ತು ಜಪ್ತಿ ಮಾಡಲು ಸರ್ಕಾರಕ್ಕೆ ಅಧಿಕಾರ ನೀಡುವ ಈ ಕಾನೂನು ಅತ್ಯಗತ್ಯವಾಗಿತ್ತು,” ಎಂದರು. ಈ ಕಾನೂನಿನ ಮೂಲಕ ರಾಜ್ಯದಲ್ಲಿ ಆರ್ಥಿಕ ಶಿಸ್ತು ತರಲು ಐತಿಹಾಸಿಕ ಹೆಜ್ಜೆ ಇಡಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ನಂದಿ ಗಿರಿಧಾಮದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ವಿಸ್ತೃತ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಸಚಿವ ಎಚ್.ಕೆ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಜುಲೈ 5ರಂದು ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಆಗಸ್ಟ್ 13ರಂದು ತನ್ನ ವರದಿಯನ್ನು ಸಚಿವ ಸಂಪುಟಕ್ಕೆ ಸಲ್ಲಿಸಿತು. ಈ ವರದಿಯೊಂದಿಗೆ ಕರಡು ಮಸೂದೆಯನ್ನು ಸಚಿವ ಸಂಪುಟಕ್ಕೆ ಮಂಡಿಸಲಾಯಿತು, ಇದನ್ನು ಸಂಪುಟವು ಸರ್ವಾನುಮತದಿಂದ ಅಂಗೀಕರಿಸಿತು.
ವಿಧಾನಮಂಡಲದ ಅಂಗೀಕಾರ:
ಆಗಸ್ಟ್ 18ರಂದು ವಿಧಾನಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಲಾಯಿತು. ಆಗಸ್ಟ್ 21 ರಂದು ವಿಧಾನಸಭೆಯಲ್ಲಿ ಮತ್ತು ಆಗಸ್ಟ್ 22 ರಂದು ವಿಧಾನ ಪರಿಷತ್ತಿನಲ್ಲಿ ಮಸೂದೆಯನ್ನು ಅಂಗೀಕರಿಸಲಾಯಿತು. ರಾಜ್ಯಪಾಲರು ಸೆಪ್ಟೆಂಬರ್ 9 ರಂದು ಈ ಮಸೂದೆಗೆ ಅಂಗೀಕಾರ ನೀಡುವ ಮೂಲಕ ಕಾನೂನಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. “ಈ ಕಾನೂನು ಕನ್ನಡಿಗರ ಆಸ್ತಿಯನ್ನು ಕನ್ನಡಿಗರಿಗೆ ಮರಳಿಸುವ ಸರ್ಕಾರದ ಗುರಿಯನ್ನು ಈಡೇರಿಸಿದೆ,” ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
“ಕರ್ನಾಟಕ ಸರ್ಕಾರವು ಕನ್ನಡ ನಾಡಿನ ಜನತೆಗೆ ನೀಡಿದ ವಾಗ್ದಾನವನ್ನು ಸಂಪೂರ್ಣವಾಗಿ ಈಡೇರಿಸಿದೆ. ಅಕ್ರಮ ಗಣಿಗಾರಿಕೆಯಿಂದ ಸಂಪಾದಿತ ಆಸ್ತಿಗಳನ್ನು ಜಪ್ತಿ ಮಾಡಲು ಮತ್ತು ವಸೂಲಾತಿ ಆಯುಕ್ತರನ್ನು ನೇಮಿಸಲು ಈ ಕಾನೂನು ದಾರಿ ಮಾಡಿಕೊಟ್ಟಿದೆ. ಇದರಿಂದ ರಾಜ್ಯದ ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸಲಾಗುವುದು,” ಎಂದು ಎಚ್.ಕೆ. ಪಾಟೀಲ್ ತಿಳಿಸಿದರು.