ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವರಾಜ್ ಎಂಬಾತ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಗ್ರಾಮಸ್ಥರು ತಕ್ಕ ಶಿಕ್ಷೆಗಾಗಿ ಆಗ್ರಹಿಸಿದ್ದಾರೆ.
ಆಳಂದ ತಾಲೂಕಿನ ಮಾದನಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಳೆದ 4-5 ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಶಿವರಾಜ್, ತನ್ನ ಸ್ವಂತ ಗ್ರಾಮದ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಗ್ರಾಮದ ಎಲ್ಲರಿಗೂ ಪರಿಚಿತನಾಗಿದ್ದ ಈತ, ವಿದ್ಯಾರ್ಥಿಗಳ ಮತ್ತು ಅವರ ಕುಟುಂಬದ ಹಿನ್ನೆಲೆಯನ್ನು ಚೆನ್ನಾಗಿ ತಿಳಿದಿದ್ದ. ಆದರೆ, ಈ ಪರಿಚಯವನ್ನೇ ದುರ್ಬಳಕೆ ಮಾಡಿಕೊಂಡ ಶಿವರಾಜ್, 8ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಕಣ್ಣು ಹಾಕಿದ್ದಾನೆ.
ವಿದ್ಯಾರ್ಥಿನಿಯ ತಂದೆ–ತಾಯಿ ಕೂಲಿ ಕೆಲಸಕ್ಕೆ ಹೋಗಿ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿದ ಶಿವರಾಜ್, ಆಕೆ ಒಂಟಿಯಾಗಿರುವಾಗ ಮನೆಗೆ ನುಗ್ಗಿ ಮೃಗೀಯವಾಗಿ ಅತ್ಯಾಚಾರ ಎಸಗಿದ್ದಾನೆ. ಬಡ ಕಾರ್ಮಿಕ ಕುಟುಂಬದ ಈ ವಿದ್ಯಾರ್ಥಿನಿಯ ಚಲನವಲನಗಳನ್ನು ಗಮನಿಸುತ್ತಿದ್ದ ಈ ಕಾಮುಕ ಶಿಕ್ಷಕ, ತಾನೇ ಪಾಠ ಕಲಿಸಿದ ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ನಡೆಸಿದ್ದಾನೆ.
ಅತ್ಯಾಚಾರದಿಂದ ಆಘಾತಕ್ಕೊಳಗಾದ ವಿದ್ಯಾರ್ಥಿನಿ ಚೀರಾಡುತ್ತಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗದೇ ನರಳಿದ್ದಾಳೆ. ಘಟನೆಯ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ ಬಳಿಕ, ಅವರು ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ. ಘಟನೆ ನಡೆದ ಎರಡು ದಿನಗಳವರೆಗೆ ನಾಪತ್ತೆಯಾಗಿದ್ದ ಆರೋಪಿ ಶಿವರಾಜ್‌ನನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಪ್ರಕರಣವನ್ನು ಪೋಕ್ಸೋ ಕಾಯಿದೆಯಡಿ ದಾಖಲಿಸಲಾಗಿದೆ.





