ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ಗಂಜಾಮ್‌ನಲ್ಲಿ ನಾಗಮಂಗಲ ಮೂಲದ 45 ವರ್ಷದ ವ್ಯಕ್ತಿಯೊಬ್ಬ ಭಿಕ್ಷೆ ಬೇಡುವ ನೆಪದಲ್ಲಿ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ಆರೋಪಿಯು ಶನಿವಾರ ರಾತ್ರಿ ಗಂಜಾಮ್‌ನ ಮನೆಯೊಂದಕ್ಕೆ ನುಗ್ಗಿ ಮೊಬೈಲ್ ಕದ್ದಿದ್ದು, ಇಂದು ಬೆಳಿಗ್ಗೆ ಮತ್ತೊಂದು ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸುವ ವೇಳೆ ಗ್ರಾಮಸ್ಥರಿಗೆ ಸಿಕ್ಕಿಬಿದ್ದಿದ್ದಾನೆ.
ಗ್ರಾಮಸ್ಥರು ಆರೋಪಿಯನ್ನು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ್ದಾರೆ. ಎರಡು ದಿನಗಳ ಹಿಂದೆಯೂ ಗಂಜಾಮ್‌ನಲ್ಲಿ ಇದೇ ರೀತಿಯ ಕಳ್ಳತನದ ಘಟನೆ ನಡೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಆರೋಪಿಯನ್ನು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯ ವಶಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.