ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪ, ಅತ್ಯಾಚಾರ ಮತ್ತು ಕೊಲೆಗಳಿಗೆ ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್ ಎಂದೇ ಗುರುತಿಸಲಾದ ಸಿ.ಎನ್. ಚಿನ್ನಯ್ಯನವರಿಂದ ಗಂಭೀರ ಆರೋಪಗಳು ಕೇಳಿಬಂದಿದ್ದವು.
ಈ ಆರೋಪಗಳನ್ನು ತನಿಖೆ ಮಾಡಲು ಕರ್ನಾಟಕ ಸರ್ಕಾರವು ಡಿಜಿಪಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿತು. ಆದರೆ, ತನಿಖೆಯಲ್ಲಿ ಯಾವುದೇ ಸೂಕ್ತ ಕುರುಹುಗಳು ಸಿಗದ ಕಾರಣ, ಈ ಆರೋಪಗಳು ಬುರುಡೆ ಕಥೆ ಎಂದು ಸಾಬೀತಾಗಿದೆ. ಈಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಭಕ್ತಾದಿಗಳಿಗೆ ಮಹತ್ವದ ಕರೆ ನೀಡಿದ್ದಾರೆ.
ಜೈನ ಸಮುದಾಯದಿಂದ ಬೆಂಬಲ
ಇಂದು (ಆಗಸ್ಟ್29) ಧರ್ಮಸ್ಥಳದಲ್ಲಿ ನಡೆದ ಜೈನ ಮುನಿಗಳ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜೈನ ಮಠಗಳ ಭಟ್ಟಾರಕರು ಮತ್ತು ಜೈನ ಸಂಘದ ಸಂಸ್ಥೆಗಳಿಂದ ನೂರಾರು ಜನ ಭಾಗವಹಿಸಿದ್ದರು. ಧರ್ಮಸ್ಥಳದ ಪ್ರವೇಶದ್ವಾರದಿಂದ ದೇಗುಲದವರೆಗೆ ಜೈನ ಸಮುದಾಯದವರು ಪಾದಯಾತ್ರೆ ನಡೆಸಿದರು. ಬಳಿಕ, ಅಮೃತ ವರ್ಷಿಣಿ ಸಭಾಂಗಣದಲ್ಲಿ ಜೈನ ಮುನಿಗಳು ಮತ್ತು ಭಟ್ಟಾರಕರ ನೇತೃತ್ವದಲ್ಲಿ ವೇದಿಕೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಶ್ರೀ ಕ್ಷೇತ್ರಕ್ಕೆ ಬಂದಿರುವ ಈ ವಿಶೇಷ ಕಳೆಯಿಂದ ತಮಗೆ ಸಂತಸವಾಗಿದೆ ಎಂದು ತಿಳಿಸಿದರು. “ಮೂಡಬಿದ್ರೆ ಭಟ್ಟಾರಕರ ಪಟ್ಟಾಭಿಷೇಕದ ದಿನವಾದ ಇಂದು, ಅವರೂ ನಮ್ಮೊಂದಿಗೆ ಇದ್ದೇವೆ ಎಂಬ ಸಂದೇಶ ನೀಡಿದ್ದಾರೆ. ಇದಕ್ಕಿಂತ ದೊಡ್ಡ ಮಾತು ನನಗೆ ಬೇಕಿಲ್ಲ,” ಎಂದು ಭಾವುಕರಾದರು.
ಶಾಂತಿ ಮತ್ತು ತಾಳ್ಮೆಯ ಕರೆ
ಎಸ್‌ಐಟಿ ತನಿಖೆಯಿಂದಾಗಿ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳದಿರುವುದಕ್ಕೆ ಕಾರಣವನ್ನು ತಿಳಿಸಿದ ಹೆಗ್ಗಡೆ, “ಈ ಬೆಳವಣಿಗೆಯಿಂದ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಕಣ್ಣೀರು ಹಾಕಿದ್ದಾರೆ. ಕೆಲವು ಮಹಿಳೆಯರು ಯಾವುದೇ ರೀತಿಯ ಹೋರಾಟಕ್ಕೆ ತಯಾರಿದ್ದಾರೆ. ಆದರೆ, ಇಂತಹ ಹೋರಾಟದ ಅಗತ್ಯವಿಲ್ಲ. ಎಲ್ಲವನ್ನೂ ಮಂಜುನಾಥ ಸ್ವಾಮಿಗೆ ಬಿಟ್ಟಿದ್ದೇವೆ, ಮತ್ತು ಅದರ ಫಲ ಈಗ ದೊರೆಯುತ್ತಿದೆ,” ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. “ಸತ್ಯಕ್ಕೆ ಒಂದೇ ಮುಖವಿದೆ. ನಾವು ಯಾವತ್ತೂ ಸತ್ಯದಿಂದ ಹಿಂದೆ ಸರಿದಿಲ್ಲ, ಮುಂದೆಯೂ ಸರಿಯುವುದಿಲ್ಲ. ಭಕ್ತರು ಶಾಂತಿಯನ್ನು ಕಾಪಾಡಿ, ತಾಳ್ಮೆಯಿಂದ ಇರಬೇಕು,” ಎಂದು ಡಾ. ವೀರೇಂದ್ರ ಹೆಗ್ಗಡೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜೈನ ಸಮುದಾಯದ ಒಗ್ಗಟ್ಟು ಸ್ಪಷ್ಟವಾಗಿ ಕಂಡುಬಂದಿತು. “ಜನಿವಾರ ಧಾರಣೆ ಜಾತಿ ಅಥವಾ ವೇಷಕ್ಕಾಗಿ ಅಲ್ಲ, ಮೂರು ಧರ್ಮಗಳ ಆಚರಣೆಗಾಗಿ. ದಶಲಕ್ಷಣವು ಪೂಜೆ ಮತ್ತು ಪ್ರಾರ್ಥನೆಗಾಗಿರುವುದು,” ಎಂದು ಹೆಗ್ಗಡೆ ತಿಳಿಸಿದರು. ತಮಿಳುನಾಡಿನಿಂದಲೂ ಸ್ವಾಮೀಜಿಗಳು ಬಂದಿದ್ದು, “ಒಂದು ಸನ್ನೆ ಕೊಟ್ಟರೆ ಸಾವಿರಾರು ಜನ ಸೇರುತ್ತಾರೆ. ಆದರೆ, ಸಂಯಮವೇ ಶ್ರೇಷ್ಠವಾದದ್ದು,” ಎಂದು ಡಾ. ವೀರೇಂದ್ರ ಹೆಗ್ಗಡೆ ಶಾಂತಿಯ ಸಂದೇಶವನ್ನು ಸಾರಿದರು.
ಸತ್ಯದ ಮೇಲೆ ವಿಶ್ವಾಸ
“ನಾವು ಮಾಡುವ ಪ್ರಯತ್ನಗಳಿಗೆ ಮಂಜುನಾಥ ಸ್ವಾಮಿಯ ಅನುಗ್ರಹವಿದೆ. ಎಲ್ಲರೂ ದಶ ಧರ್ಮಗಳನ್ನು ಪಾಲಿಸಬೇಕು,” ಎಂದು ಹೆಗ್ಗಡೆ ಒತ್ತಿ ಹೇಳಿದರು. ಧರ್ಮಸ್ಥಳದ 800 ವರ್ಷಗಳ ಇತಿಹಾಸ ಮತ್ತು ಚತುರ್ವಿಧ ದಾನದ ಚಾರಿತ್ರಿಕ ಪರಂಪರೆಯನ್ನು ಎತ್ತಿಹಿಡಿದ ಅವರು, ಈ ಆರೋಪಗಳು ಶ್ರೀ ಕ್ಷೇತ್ರದ ಪ್ರಗತಿಗೆ ಅಡ್ಡಿಯಾಗಲಾರವು ಎಂದು ವಿಶ್ವಾಸ ವ್ಯಕ್ತಪಡಿಸಿದರು. “ಭಕ್ತರ ವಿಶ್ವಾಸವೇ ಧರ್ಮಸ್ಥಳದ ಬಲ,” ಎಂದು ತಿಳಿಸಿದ ಹೆಗ್ಗಡೆ, ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.