ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಸಮಾಧಿ ಮಾಡಲಾಗಿದೆ ಎಂಬ ಆರೋಪದ ಕುರಿತಾದ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯು ನಿರ್ಣಾಯಕ ಹಂತವನ್ನು ತಲುಪಿದೆ. ಅನಾಮಿಕ ವ್ಯಕ್ತಿಯೊಬ್ಬನ ಹೇಳಿಕೆಯ ಆಧಾರದ ಮೇಲೆ ರಚಿಸಲಾದ ಎಸ್‌ಐಟಿ ತಂಡವು, ಧರ್ಮಸ್ಥಳದ ಅರಣ್ಯ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸಿದರೂ ಯಾವುದೇ ಪ್ರಮುಖ ಸಾಕ್ಷ್ಯಗಳು ಸಿಗಲಿಲ್ಲ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಕ್ಕೆ ತಾತ್ಕಾಲಿಕವಾಗಿ ವಿರಾಮ ನೀಡಲಾಗಿದೆ ಎಂದು ತಿಳಿದುಬಂದಿದೆ. ಇಂದು ಸಂಜೆಯೊಳಗೆ ಎಸ್‌ಐಟಿ ತಂಡವು ತನ್ನ ಅಂತಿಮ ವರದಿಯನ್ನು ಗೃಹ ಸಚಿವರಿಗೆ ಸಲ್ಲಿಸುವ ಸಾಧ್ಯತೆ ಇದೆ.
17 ಸ್ಥಳಗಳಲ್ಲಿ ಉತ್ಖನನ:
ಧರ್ಮಸ್ಥಳದ ಅರಣ್ಯ ಭಾಗದಲ್ಲಿ ನೂರಾರು ಶವಗಳನ್ನು ಸಮಾಧಿ ಮಾಡಿರುವುದಾಗಿ “ಮಾಸ್ಕ್ ಮ್ಯಾನ್” ಎಂದು ಕರೆಯಲ್ಪಡುವ ಅನಾಮಿಕ ವ್ಯಕ್ತಿಯು ಆರೋಪಿಸಿದ್ದು, ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಈ ವ್ಯಕ್ತಿಯು ಸೂಚಿಸಿದ ಸುಮಾರು 17 ಸ್ಥಳಗಳಲ್ಲಿ ಎಸ್‌ಐಟಿ ತಂಡವು ಉತ್ಖನನ ಕಾರ್ಯ ನಡೆಸಿತಾದರೂ, ಯಾವುದೇ ಗಮನಾರ್ಹ ಸಾಕ್ಷ್ಯಗಳು ದೊರೆತಿಲ್ಲ ಎಂದು ವರದಿಯಾಗಿದೆ. ಅರಣ್ಯ ಪ್ರದೇಶದಲ್ಲಿ ಇಂಚಿಂಚಾಗಿ ಶೋಧ ನಡೆಸಿದರೂ ಯಾವುದೇ ಕುರುಹುಗಳು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಶೋಧ ಕಾರ್ಯಕ್ಕೆ ತಾತ್ಕಾಲಿಕ ವಿರಾಮ
ಆಗಸ್ಟ್ 16 ರಿಂದಲೇ ಎಸ್‌ಐಟಿ ತಂಡವು ಶೋಧ ಕಾರ್ಯಕ್ಕೆ ಬ್ರೇಕ್ ಹಾಕಿದೆ. ಶನಿವಾರದಂದು ದೂರುದಾರನ ವಿಚಾರಣೆಯನ್ನು ಕಚೇರಿಯಲ್ಲಿ ಹಲವು ಗಂಟೆಗಳ ಕಾಲ ನಡೆಸಲಾಗಿದೆ. ಎಲ್ಲಾ ಆಯಾಮಗಳಲ್ಲಿ ವಿಚಾರಣೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿ, ಎಸ್‌ಐಟಿ ತಂಡವು ತನ್ನ ಕಂಪ್ಲೀಟ್ ರಿಪೋರ್ಟ್ ತಯಾರಿಸಿದೆ ಎಂದು ಹೇಳಲಾಗುತ್ತಿದೆ. ಈ ವರದಿಯನ್ನು ಇಂದು ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಸಲ್ಲಿಕೆ ಮಾಡಲಾಗುತ್ತದೆ ಎನ್ನಲಾಗ್ತಿದೆ.
ಮಳೆಗಾಲದ ಅಧಿವೇಶನದಲ್ಲಿ ಧರ್ಮಸ್ಥಳ ಪ್ರಕರಣವು ಭಾರೀ ಚರ್ಚೆಗೆ ಗ್ರಾಸವಾಗಿದೆ. ಸೋಮವಾರದಂದು ವಿಧಾನಸಭೆಯಲ್ಲಿ ಗೃಹ ಸಚಿವರು ಈ ತನಿಖೆಯ ವರದಿಯ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡವು ಎಲ್ಲಾ ಹೇಳಿಕೆಗಳನ್ನು ದಾಖಲಿಸಿ, ಸಮಗ್ರ ವರದಿಯನ್ನು ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣದಲ್ಲಿ ರಾಜಕೀಯ ಒತ್ತಡಗಳು ಕೂಡ ಗಮನಾರ್ಹವಾಗಿವೆ. ಬಿಜೆಪಿಯು ಈ ಆರೋಪಗಳನ್ನು “ಹಿಂದೂ ದೇವರುಗಳನ್ನು ಮತ್ತು ಧಾರ್ಮಿಕ ಸ್ಥಳಗಳನ್ನು ಅಪಮಾನಿಸುವ ಒಂದು ಒಳಸಂಚು” ಎಂದು ಕರೆದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಈ ಆರೋಪಗಳ ಹಿಂದೆ ಧರ್ಮಸ್ಥಳದ ಗೌರವವನ್ನು ಕೆಡವುವ ಒಂದು ಒಳಸಂಚು ಇದೆ ಎಂದು ಆರೋಪಿಸಿದ್ದಾರೆ.





