ಬೆಂಗಳೂರು: ಧರ್ಮಸ್ಥಳ ಪ್ರಕರಣದ ಸತ್ಯಾಸತ್ಯತೆಯನ್ನು ಎಸ್‌ಐಟಿ ತನಿಖೆಯಿಂದ ಬಯಲಿಗೆ ತರಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಶುಕ್ರವಾರ (ಆಗಸ್ಟ್ 15) ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ತಿಳಿಸಿದರು. “ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ಬಹಿರಂಗವಾಗಬೇಕು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಧರ್ಮಸ್ಥಳಕ್ಕೆ ಸಂಬಂಧಿಸಿದ ಹೇಳಿಕೆಯನ್ನು ಗಮನಿಸಿದ್ದೇನೆ. ನಾವೆಲ್ಲರೂ ಶ್ರೀ ಮಂಜುನಾಥನ ಭಕ್ತರು. ಡಿಸಿಎಂ ಅವರ ಹೇಳಿಕೆಗೆ ನಾನು ಸಂಪೂರ್ಣ ಸಹಮತ ವ್ಯಕ್ತಪಡಿಸುತ್ತೇನೆ,” ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಅವಹೇಳನಕಾರಿ ಪ್ರಚಾರ ನಡೆಯುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದರು.
“ಸೌಜನ್ಯಳಿಗೆ ಅನ್ಯಾಯವಾಗಿದ್ದರೆ, ಅವಳಿಗೆ ನ್ಯಾಯ ಒದಗಿಸಬೇಕು. ಆದರೆ, ಕೆಲವರು ತಮ್ಮ ಮುಖವನ್ನು ಮುಚ್ಚಿಕೊಂಡು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಇಂತಹ ಆರೋಪಗಳಿಗೆ ಉತ್ತರ ಸಿಗಬೇಕು ಎಂದೇ ಎಸ್‌ಐಟಿ ರಚನೆಯಾಗಿದೆ. ಶೀಘ್ರವೇ ಈ ಪ್ರಕರಣದಲ್ಲಿ ಸತ್ಯ ಬಯಲಿಗೆ ಬರಲಿದೆ,” ಎಂದು ಸಚಿವರು ಭರವಸೆ ನೀಡಿದರು.
ಎಸ್‌ಐಟಿ ತನಿಖೆಯ ಪ್ರಗತಿಯ ಬಗ್ಗೆ ಅಧಿಕಾರಿಗಳು ಗೃಹ ಸಚಿವರಿಗೆ ನಿಯಮಿತವಾಗಿ ಮಾಹಿತಿ ನೀಡುತ್ತಿದ್ದಾರೆ ಎಂದು ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.