ಬೆಂಗಳೂರು: ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಅಕ್ರಮವಾಗಿ ಹೂತು ಹಾಕಲಾಗಿದೆ ಎಂದು ದೂರು ನೀಡಿದ್ದ ಚಿನ್ನಯ್ಯ (ಸಿಎನ್ ಚಿನ್ನಯ್ಯ) ಅವರನ್ನು ವಿಶೇಷ ತನಿಖಾ ತಂಡ (SIT) ಧರ್ಮಸ್ಥಳದಿಂದ ಬೆಂಗಳೂರಿಗೆ ಕರೆತಂದಿದೆ. ಈ ಕ್ರಮದೊಂದಿಗೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಬೆಂಗಳೂರಿನಲ್ಲಿ ಸ್ಥಳ ಮಹಜರು ನಡೆಸಲಾಗಿದೆ.
ಧರ್ಮಸ್ಥಳ ಪ್ರಕರಣದ ತನಿಖೆ ಮತ್ತೊಂದು ಹಂತಕ್ಕೆ ತಲುಪಿದೆ. ಚಿನ್ನಯ್ಯನನ್ನು ಬೆಂಗಳೂರಿನ ಬಗಲಕುಂಟೆ ಸಮೀಪದ ಮಲ್ಲಸಂದ್ರಕ್ಕೆ ಕರೆತರಲಾಗಿದೆ. ಮಲ್ಲಸಂದ್ರದ BHEL ಲೇಔಟ್‌ನಲ್ಲಿ ಜಯಂತ್ ಟಿ ಅವರ ಮನೆ ಇದ್ದು, ಇವರು ಪ್ರಕರಣದ ಎರಡನೇ ದೂರುದಾರರಾಗಿದ್ದಾರೆ. ಜಯಂತ್ ಟಿ ‘ನೀತಿ’ ಎಂಬ ಎನ್‌ಜಿಒ ನಡೆಸುತ್ತಿದ್ದಾರೆ. ಧರ್ಮಸ್ಥಳ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ದೂರು ನೀಡಿದ್ದರು. ವಿಶೇಷವಾಗಿ ಯುವತಿಯ ಮೃತದೇಹವನ್ನು ಹೂತು ಹಾಕಿರುವುದನ್ನು ನೋಡಿದ್ದೇನೆ ಎಂದು SITಗೆ ಹೇಳಿದ್ದರು.
ಚಿನ್ನಯ್ಯ ಜಯಂತ್ ಅವರ ನಿವಾಸದಲ್ಲಿ ಆಶ್ರಯ ಪಡೆದಿದ್ದ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ SIT ಅವರನ್ನು ಬೆಂಗಳೂರಿಗೆ ಕರೆತಂದಿದೆ. ಜಯಂತ್ ಮನೆಯಲ್ಲಿ ಸ್ಥಳ ಮಹಜರು ನಡೆಸಲಾಗಿದ್ದು, ಕುಟುಂಬಸ್ಥರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಮನೆಯಲ್ಲೇ ಚಿನ್ನಯ್ಯನನ್ನು ಕೂರಿಸಿಕೊಂಡು ವಿಚಾರಣೆ ನಡೆಸಲಾಗಿದೆ. ಚಿನ್ನಯ್ಯ ಯಾವಾಗ ಮನೆಗೆ ಬಂದಿದ್ದರು? ಎಷ್ಟು ದಿನಗಳ ಕಾಲ ಇದ್ದರು? ಎಂಬುದರ ಬಗ್ಗೆ ವಿವರಗಳನ್ನು ಸಂಗ್ರಹಿಸಲಾಗಿದೆ.
ಮಾಹಿತಿಗಳ ಪ್ರಕಾರ, ತಿಮರೋಡಿ ಸಂಪರ್ಕದ ನಂತರ ಚಿನ್ನಯ್ಯ ಬೆಂಗಳೂರಿನಲ್ಲಿದ್ದರು. ಹಲವು ಬಾರಿ ಬೆಂಗಳೂರಿಗೆ ಬಂದು ಹೋಗಿದ್ದರು. ಕಳೆದ ಆರು ತಿಂಗಳ ಹಿಂದೆಯೇ ಇಲ್ಲಿಯೇ ಇದ್ದ ಬಗ್ಗೆ ಸುಳಿವುಗಳಿವೆ. ಚಿನ್ನಯ್ಯನ ರಹಸ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಇರಿಸಲಾಗಿತ್ತು. ಇಲ್ಲಿಂದಲೇ ವಕೀಲರ ಜೊತೆಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದರು ಎನ್ನಲಾಗಿದೆ.
ಚಿನ್ನಯ್ಯ ಮೊದಲು ಮುಖಮುಚ್ಚಿಕೊಂಡು ಪೊಲೀಸ್ ಠಾಣೆಗೆ ಬಂದು ಧರ್ಮಸ್ಥಳದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗಳು ನಡೆದಿವೆ ಎಂದು ದೂರು ನೀಡಿದ್ದರು. ಆದರೆ, ನಂತರ ಅವರ ದೂರುಗಳು ಸುಳ್ಳು ಎಂದು ಬೆಳಕಿಗೆ ಬಂದಿದ್ದು, ಕಳೆದ ವಾರ ಅವರನ್ನು ಸುಳ್ಳು ಸಾಕ್ಷ್ಯ ಮತ್ತು ಮೋಸದ ಆರೋಪದಡಿ ಬಂಧಿಸಲಾಗಿತ್ತು. ಈಗ ಬೆಂಗಳೂರಿನಲ್ಲಿ ನಡೆದ ತನಿಖೆ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.