ದಕ್ಷಿಣಕನ್ನಡ: ಧರ್ಮಸ್ಥಳದ ರಹಸ್ಯ ಸಾಮೂಹಿಕ ಸಮಾಧಿ ಪ್ರಕರಣದ ತನಿಖೆಯಲ್ಲಿ ವಿಶೇಷ ತನಿಖಾ ತಂಡ (SIT) ತೀವ್ರಗತಿಯಲ್ಲಿ ತನಿಖೆ ಮುಂದುವರೆಸಿದೆ. ಅನಾಮಿಕನ ಗುರುತಿಸಿದ 13 ಸ್ಥಳಗಳ ಪೈಕಿ 12 ಸ್ಥಳಗಳಲ್ಲಿ ಭೂಮಿ ಅಗೆಯುವ ಕಾರ್ಯ ಮುಗಿದಿದ್ದು, ಇಂದು 13ನೇ ಸ್ಥಳದ ಮಹಜರು ನಡೆಯಲಿದೆ. ಈ ಪ್ರಕರಣದಲ್ಲಿ ಇದುವರೆಗೆ 6ನೇ ಸ್ಥಳದಲ್ಲಿ 25 ಮೂಳೆಗಳು ಮತ್ತು 11ನೇ ಸ್ಥಳದ ಬಳಿ ಒಂದು ಅಸ್ಥಿಪಂಜರ ಪತ್ತೆಯಾಗಿದೆ. ಇಂದಿನ ಕಾರ್ಯಾಚರಣೆಯೊಂದಿಗೆ ಭೂಮಿ ಅಗೆಯುವ ಕಾರ್ಯ ಮುಕ್ತಾಯವಾಗುವ ಸಾಧ್ಯತೆಯಿದೆ, ಆದರೆ ತನಿಖೆಯ ಮುಂದಿನ ಹಾದಿ ಕುತೂಹಲ ಹೆಚ್ಚಿಸಿದೆ.
ನೇತ್ರಾವತಿ ಸ್ನಾನ ಘಟ್ಟದ ಬಳಿಯ ಬಂಗ್ಲಗುಡ್ಡ ಕಾನನ ಪ್ರದೇಶದಲ್ಲಿ ಈಗಾಗಲೇ 12 ಸ್ಥಳಗಳಲ್ಲಿ ಎಸ್‌ಐಟಿ ತಂಡ ಭೂಮಿ ಅಗೆಯುವ ಕಾರ್ಯ ನಡೆಸಿದೆ. ಈ ಪೈಕಿ 6ನೇ ಸ್ಥಳದಲ್ಲಿ 25 ಮೂಳೆಗಳು ಮತ್ತು ಬುರುಡೆ ಕುರುಹುಗಳು ಪತ್ತೆಯಾಗಿವೆ. 11ನೇ ಸ್ಥಳದಿಂದ 100 ಅಡಿ ದೂರದಲ್ಲಿ ಹೊಸ ಜಾಗದಲ್ಲಿ ಒಂದು ಅಸ್ಥಿಪಂಜರ, ಒಂದು ಸೀರೆ, ಮತ್ತು ಕೆಲವು ಬಟ್ಟೆಯ ತುಂಡುಗಳು ಸಿಕ್ಕಿವೆ. ಈ ಅಸ್ಥಿಪಂಜರವನ್ನು ಫಾರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (FSL)ಗೆ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. ಇದೇ ವೇಳೆ, ದೂರುದಾರನ ವಕೀಲ ಮಂಜುನಾಥ್ ಎನ್, ಹೊಸ ಸ್ಥಳದಲ್ಲಿ ಮೂರು ಅಸ್ಥಿಪಂಜರಗಳು, ಒಂದು ಮಹಿಳೆಯ ಕಳೇಬರ, ಮತ್ತು ಸೀರೆ ಸಿಕ್ಕಿವೆ ಎಂದು ಆರೋಪಿಸಿದ್ದಾರೆ, ಇದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
1ನೇ ಸ್ಥಳದಲ್ಲಿ ಪಾನ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪತ್ತೆಯಾಗಿದ್ದು, ಇದು ಜಂಡೀಸ್‌ನಿಂದ 2025ರಲ್ಲಿ ಮೃತಪಟ್ಟ ವ್ಯಕ್ತಿಯದ್ದಾಗಿತ್ತು, ಆದರೆ ಇದು ಧರ್ಮಸ್ಥಳದಲ್ಲಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. 8ನೇ ಸ್ಥಳದಲ್ಲಿ ಹರಿದ ಕೆಂಪು ಬಣ್ಣದ ಬ್ಲೌಸ್ ತುಂಡು ಸಿಕ್ಕಿದ್ದರೆ, 11 ಮತ್ತು 12ನೇ ಸ್ಥಳಗಳಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ. 13ನೇ ಸ್ಥಳದ ಇಂದಿನ ಮಹಜರು ಫಲಿತಾಂಶವು ತನಿಖೆಯ ದಿಕ್ಕನ್ನು ನಿರ್ಧರಿಸಲಿದೆ.
ಎಸ್ಐಟಿ ಹೆಗಲಿಗೆ ಮತ್ತೆರಡು ಪ್ರಕರಣಗಳು ಹಸ್ತಾಂತರ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಹೊಸ ದೂರುಗಳು ಎಸ್‌ಐಟಿಗೆ ಹಸ್ತಾಂತರವಾಗಿವೆ. 6ನೇ ಸ್ಥಳದಲ್ಲಿ ಪತ್ತೆಯಾದ 25 ಮೂಳೆಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ UDR (ಅನಿರ್ಧಾರಿತ ಮರಣ) ಪ್ರಕರಣ ದಾಖಲಾಗಿದೆ. ಇದೇ ವೇಳೆ, ಸಾಮಾಜಿಕ ಕಾರ್ಯಕರ್ತ ಜಯಂತ್ ಟಿ, ಒಬ್ಬ ಬಾಲಕಿಯ ಮೃತದೇಹವನ್ನು ಮುಚ್ಚಿರುವುದನ್ನು ತಾನು ನೋಡಿದ್ದೇನೆ ಎಂದು ದೂರು ದಾಖಲಿಸಿದ್ದಾರೆ. ಈ ಎರಡು ಪ್ರಕರಣಗಳನ್ನು ಎಸ್‌ಐಟಿ ಮುಂದಿನ ತನಿಖೆಗೆ ಸ್ವೀಕರಿಸಿದೆ.
ಇಂದು ಕಾರ್ಯಾಚರಣೆ ಮುಕ್ತಾಯವಾಗುತ್ತಾ..? ಎಸ್‌ಐಟಿ ಮುಂದಿನ ನಡೆ ಏನು?
ಇಂದು 13ನೇ ಸ್ಥಳದ ಭೂಮಿ ಅಗೆಯುವ ಕಾರ್ಯವನ್ನು ಎಸ್‌ಐಟಿ ಆರಂಭಿಸಲಿದೆ. ಈ ಸ್ಥಳದ ಮಹಜರು ಬಳಿಕ ಯಾವುದೇ ಕಳೇಬರ ಸಿಗದಿದ್ದರೆ, ದೂರುದಾರ ಅನಾಮಿಕನ ವಿಚಾರಣೆಯನ್ನು ತೀವ್ರಗೊಳಿಸಲಾಗುವುದು. ಅನಾಮಿಕನ ಬ್ರೈನ್ ಮ್ಯಾಪಿಂಗ್ ಅಥವಾ ಸುಳ್ಳು ಪತ್ತೆ ಪರೀಕ್ಷೆ (Lie Detector Test) ನಡೆಸುವ ಸಾಧ್ಯತೆಯೂ ಇದೆ. ಒಂದು ವೇಳೆ ಅನಾಮಿಕ ಹೊಸ ಸ್ಥಳಗಳನ್ನು ಗುರುತಿಸಿದರೆ, ಆ ಜಾಗಗಳ ಮಹಜರು ಕೂಡ ನಡೆಯಲಿದೆ. ವಕೀಲ ಮಂಜುನಾಥ್ ಎನ್ ಅವರ ಮೂರು ಅಸ್ಥಿಪಂಜರಗಳ ಆರೋಪವು ತನಿಖೆಗೆ ಹೊಸ ಆಯಾಮವನ್ನು ನೀಡಿದ್ದು, ಇದರ ಸತ್ಯಾಸತ್ಯತೆಯನ್ನು ಎಸ್‌ಐಟಿ ಪರಿಶೀಲಿಸಲಿದೆ.