ದಾವಣಗೆರೆ: ವಾಹನ ತಪಾಸಣೆ ವೇಳೆ ಪೊಲೀಸ್ ಕಾನ್ಸ್‌ಟೇಬಲ್(Police Constable) ಮೇಲೆ ಲಾರಿ ಹರಿದು ಸಾವನ್ನಪ್ಪಿರುವ ಘಟನೆ ದಾವಣಗೆರೆಯ(Davanagere) ಹೆಬ್ಬಾಳು ಟೋಲ್ ಗೇಟ್ ಬಳಿ ನಡೆದಿತ್ತು. ರಾಮಪ್ಪ ಪೂಜಾರ್(27) ಮೃತ ಡಿಎಆರ್ ಕಾನ್ಸ್‌ಟೇಬಲ್. ಹೆಬ್ಬಾಳು ಟೋಲ್ ಗೇಟ್(Hebbalu Toll Gate) ಬಳಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆಗೆ ಲಾರಿಯನ್ನು ತಪಾಸಣೆ ಮಾಡಲು ಹೋದ ರಾಮಪ್ಪ ಪೂಜಾರ್ ಮೇಲೆ ಚಾಲಕ ಲಾರಿ ಹರಿಸಿ ಪರಾರಿಯಾಗಿದ್ದಾನೆ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಕಿಡಿಗೇಡಿಗಳು ಮಾಡಿದ ಅನಾಗರಿಕ ಕಾಮೆಂಟ್‌ಗಳು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಉಮಾ ಪ್ರಶಾಂತ್ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ರಾಮಪ್ಪ ಅವರ ಸಾವನ್ನು ಸಂಭ್ರಮಿಸುವಂತೆ ಅನಾಗರಿಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಎಸ್‌ಪಿ ಉಮಾ ಪ್ರಶಾಂತ್, “ಒಬ್ಬರ ಸಾವನ್ನು ಸಂಭ್ರಮಿಸುವ ನಿಮ್ಮ ಮನಸ್ಥಿತಿಯನ್ನು ನೋಡಿದರೆ, ನಿಮ್ಮ ಗುಣಲಕ್ಷಣ ಏನೆಂದು ತಿಳಿಯುತ್ತದೆ. ಎಲ್ಲೋ ಕುಳಿತು ಪೊಲೀಸ್ ಇಲಾಖೆಯ ಬಗ್ಗೆ ಅಪಪ್ರಚಾರ ಮಾಡುವ ಬದಲು, ಏನಾದರೂ ದೂರು ಇದ್ದರೆ ಠಾಣೆಗೆ ಬಂದು ದೂರು ಸಲ್ಲಿಸಿ,” ಎಂದು ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಕಾಮೆಂಟ್‌ಗಳನ್ನು ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.