ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಸಾಲ ಬಾಧೆಯಿಂದ 20 ದಿನದ ಗಂಡು ಮಗುವನ್ನು 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಾನೂನು ವಿರುದ್ಧವಾಗಿ ಮಗುವನ್ನು ಖರೀದಿಸಿದ ವ್ಯಕ್ತಿ ಮತ್ತು ಸಹಕರಿಸಿದ ಚಾಲಕನನ್ನು ದಾಂಡೇಲಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಳೇ ದಾಂಡೇಲಿಯ ದೇಶಪಾಂಡೆ ನಗರದ ನಿವಾಸಿಗಳಾದ ಮಾಹಿನ್ ಮತ್ತು ವಸೀಂ ಚಂದು ಪಟೇಲ್ ದಂಪತಿಯು ತಮ್ಮ 20 ದಿನದ ಗಂಡು ಮಗುವನ್ನು ಜುಲೈ 8ರಂದು ಬೆಳಗಾವಿ ಜಿಲ್ಲೆಯ ಅನಗೋಳದ ನೂರ್ ಅಹಮದ್ ಅಬ್ದುಲ್ ಮಜೀಜಿದ್‌ಗೆ 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ಮಾಹಿನ್ ಜೂನ್ 17ರಂದು ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಈ ಮಗುವಿಗೆ ಜನ್ಮ ನೀಡಿದ್ದರು. ದಂಪತಿಯು ಸಂಘದಿಂದ ಮಾಡಿಕೊಂಡ ಸಾಲದಿಂದ ಕಂಗಾಲಾಗಿದ್ದು, ಸಾಲಗಾರರ ಒತ್ತಡಕ್ಕೆ ಒಳಗಾಗಿ ಈ ದುರ್ಘಟನೆಗೆ ಮುಂದಾಗಿದ್ದಾರೆ.
ಈ ಘಟನೆಯ ಬಗ್ಗೆ ಅನುಮಾನಗೊಂಡ ದಾಂಡೇಲಿ ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಪಾವಸ್ಕರ್ ದಾಂಡೇಲಿ ನಗರ ಠಾಣೆಗೆ ದೂರು ಸಲ್ಲಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಉತ್ತರ ಕನ್ನಡ ಪೊಲೀಸರು ಬೆಳಗಾವಿಗೆ ತೆರಳಿ, ಮಗುವನ್ನು ಖರೀದಿಸಿದ್ದ ನೂರ್ ಅಹಮದ್ ಅಬ್ದುಲ್ ಮಜೀಜಿದ್ ಮತ್ತು ಈ ಕೃತ್ಯಕ್ಕೆ ಸಹಕರಿಸಿದ ಚಾಲಕ ಕಿಶಾನ್ ಶ್ರೀಕಾಂತ್ ಐರೇಕರ್‌ನನ್ನು ಬಂಧಿಸಿದ್ದಾರೆ. ರಕ್ಷಿತವಾದ ಮಗುವನ್ನು ಶಿರಸಿಯ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾಂಡೇಲಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಮಾಹಿನ್ ಮತ್ತು ವಸೀಂ ಚಂದು ಪಟೇಲ್ ದಂಪತಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.