ರಾಜ್ಯ ರಾಜಕಾರಣದಲ್ಲಿ ಹೊಸ ಅಲೆ ಎದ್ದಿದೆ. ಮೋದಿ ಮತ್ತು ಅಮಿತ್ ಶಾ ಸೇರಿ ಕಾಂಗ್ರೆಸ್ ನಾಯಕರನ್ನು ಸೆಳೆದು ಸರ್ಕಾರವನ್ನು ಬೀಳಿಸುವ ತಂತ್ರವನ್ನು ಹೆಣೆಯುತ್ತಿದ್ದಾರೆ ಎಂದು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಹೌದು ನೆನ್ನೆ ಕಲಬುರಗಿಯಲ್ಲಿ 216.53 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 6.20 ಕೋಟಿ ವೆಚ್ಚದ ಬ್ರಾಕಿಥೆರಪಿ ವಿಕೀರಣ ಚಿಕಿತ್ಸೆ ಘಟಕ ಉದ್ಘಾಟನೆ ಹಾಗೂ 12 ಬೃಹತ್ ಮೊತ್ತದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಕುವ ಕಾರ್ಯಕ್ರಮದಲ್ಲಿ ಸಿಎಂ ಮತ್ತು ಡಿಸಿಎಂಗೆ ಮಲ್ಲಿಕಾರ್ಜುನ್ ಖರ್ಗೆ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ದೇಶದ ವಿವಿಧ ರಾಜ್ಯಗಳಲ್ಲಿರುವ ಕಾಂಗ್ರೆಸ್ ಸರ್ಕಾರದ ನಾಯಕರ ಮೇಲೆ ಕೇಂದ್ರ ಸರ್ಕಾರ ಇಡಿ, ಸಿಬಿಐ ಅಧಿಕಾರವನ್ನು ಉಪಯೋಗಿಸಿಕೊಂಡು ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ಮಾಡಿಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ವಿರೋಧ ಪಕ್ಷಗಳ ನಾಯಕರನ್ನು ಬಿಜೆಪಿ ಪಕ್ಷಕ್ಕೆ ಬರುವಂತೆ ಮೊದಲು ಆಹ್ವಾನಿಸುತ್ತಾರೆ. ನಾಯಕರು ಬರಲು ಒಪ್ಪದೇ ಇದ್ದಾಗ ಅಂತಹ ನಾಯಕರ ಮೇಲೆ ಕೇಂದ್ರ ಸರ್ಕಾರ ಸಿಬಿಐ, ಇಡಿ ಅಧಿಕಾರವನ್ನು ಬಳಸಿಕೊಂಡು ನಾಯಕರನ್ನು ಹೆದರಿಸುವ ಹುನ್ನಾರ ನಡೆದಿದೆ. ರಾಜ್ಯದ ನಾಯಕರು ತುಂಬಾ ಹುಷಾರಾಗಿರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದರು.
ರಾಜ್ಯದ ನಾಯಕರನ್ನು ಸೆಳೆಯುವ ತಂತ್ರ ಈಗಾಲೇ ನಡೆಯುತ್ತಿದೆ. ಎಲ್ಲರೂ ಒಂದಾಗಿ ಸರ್ಕಾರವನ್ನು ಮುನ್ನಡೆಸಬೇಕು. ಜೊತೆಗೆ ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಸರ್ಕಾರ ಮನೆ ಮನಗಳಿಗೆ ತಲುಪುವ ನಿಟ್ಟಿನಲ್ಲಿ ಕೆಲಸಮಾಡಬೇಕು ಎಂದು ಅವರು ಸೂಚಿಸಿದ್ದಾರೆ.





