ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೋದಗೂರು ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆ ವೇಳೆ ದಾರುಣ ಘಟನೆಯೊಂದು ನಡೆದಿದೆ. ಡಾನ್ಸ್ ಮಾಡುತ್ತಿದ್ದ ಲಕ್ಷ್ಮೀಪತಿ(40) ಎಂಬ ವ್ಯಕ್ತಿ ಏಕಾಏಕಿ ಕುಸಿದು ಬಿದ್ದು, ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಣೇಶೋತ್ಸವದ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಲಕ್ಷ್ಮೀಪತಿ ಉತ್ಸಾಹದಿಂದ ಡಾನ್ಸ್ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಆತನಿಗೆ ತಕ್ಷಣವೇ ವೈದ್ಯಕೀಯ ಸಹಾಯ ಒದಗಿಸಲು ಯತ್ನಿಸಲಾಯಿತಾದರೂ, ಹೃದಯಾಘಾತದಿಂದಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಕೃಷಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಿಪತಿ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಗಣೇಶೋತ್ಸವದ ಸಂಭ್ರಮದ ಮಧ್ಯೆ ದುಃಖದ ಛಾಯೆ ಆವರಿಸಿದೆ.