ಬೆಂಗಳೂರು: ಮುಂದಿನ ಒಂದೂವರೆ ವರ್ಷಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರನ್ನೇ ಮುಂದುವರೆಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಮಾರ್ಮಿಕವಾಗಿ ಹೇಳಿದ್ದಾರೆ. ಆದರೆ, ಒಂದೂವರೆ ವರ್ಷಗಳ ಬಳಿಕ ತಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, “ಕಳೆದ ಒಂದೂವರೆ ವರ್ಷಗಳಿಂದ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿದ್ದಾರೆ. ಮಧ್ಯಂತರದಲ್ಲಿ ಅಧ್ಯಕ್ಷ ಸ್ಥಾನದ ಬದಲಾವಣೆ ನಮ್ಮ ಪಕ್ಷದಲ್ಲಿ ಆಗಿಲ್ಲ. ಹೀಗಾಗಿ, ಮುಂದಿನ ಒಂದೂವರೆ ವರ್ಷಗಳ ಕಾಲ ಅವರೇ ಮುಂದುವರಿಯಲಿ,” ಎಂದು ಹೇಳಿದರು.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿಯೇ ಎಂದು ಕೇಳಿದ ಪ್ರಶ್ನೆಗೆ, “ಹಿಂದೆಯೂ ನಾನು ಈ ಸ್ಥಾನಕ್ಕೆ ಅವಕಾಶ ಕೊಟ್ಟರೆ ನಿಭಾಯಿಸುವುದಾಗಿ ಹೇಳಿದ್ದೆ. ಈಗಲೂ ಆ ಮಾತಿಗೆ ಬದ್ಧನಾಗಿದ್ದೇನೆ. ಆದರೆ, ಈಗಲ್ಲ, ಒಂದೂವರೆ ವರ್ಷಗಳ ಬಳಿಕ ನನಗೆ ಅವಕಾಶ ಕೊಡಲಿ,” ಎಂದು ತಿಳಿಸಿದರು.
ವಿಜಯೇಂದ್ರ ಬದಲಾವಣೆಗೆ ಒತ್ತಾಯ:
ಬಿಜೆಪಿಯ ಅತೃಪ್ತ ಬಣದ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಬದಲಾಯಿಸಬೇಕೆಂಬ ತಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಕ್ಷವು ರಾಜ್ಯದಲ್ಲಿ ಮುಂದಿನ ಬಾರಿ ಅಧಿಕಾರಕ್ಕೆ ಬರಬೇಕಾದರೆ, ವಿಜಯೇಂದ್ರ ಅವರನ್ನು ಬದಲಾಯಿಸಬೇಕು ಎಂಬ ನಮ್ಮ ನಿಲುವನ್ನು ಈಗಾಗಲೇ ಪಕ್ಷದ ಹಿರಿಯ ನಾಯಕರಿಗೆ ತಿಳಿಸಿದ್ದೇವೆ. ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಂಡ ಬಳಿಕ ಅದನ್ನು ಮಾರ್ಪಡಿಸಲು ಆಗದು. ಹೀಗಾಗಿ, ನಾವು ನಮ್ಮ ಒತ್ತಾಯವನ್ನು ಮುಂದುವರೆಸುತ್ತಿದ್ದೇವೆ,” ಎಂದರು.
ಕುಮಾರ್ ಬಂಗಾರಪ್ಪ ಅವರು, ಕೆಲವು ತಟಸ್ಥ ನಾಯಕರು ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳದಿರುವುದರ ಬಗ್ಗೆಯೂ ಪ್ರಸ್ತಾಪಿಸಿದರು. “ನಾವು ನಮ್ಮ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದೇವೆ. ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಸಹಕಾರ ಸಚಿವರ ಹನಿಟ್ರ್ಯಾಪ್ ಪ್ರಕರಣ, ಕ್ರಿಕೆಟ್ ಅಭಿಮಾನಿಗಳ ಕಾಲ್ತುಳಿತ ದುರಂತ ಸೇರಿದಂತೆ ಹಲವು ವಿಷಯಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಠಿಣ ನಿಲುವು ಕೈಗೊಳ್ಳದೆ, ನಮ್ಮ ಪಕ್ಷದ ನಾಯಕರು ಒಳಗೊಳಗೇ ಒಪ್ಪಂದ ಮಾಡಿಕೊಂಡಿದ್ದಾರೆ. ಇದನ್ನು ನಾವು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರ ತೀರ್ಮಾನಕ್ಕೆ ಕಾಯುತ್ತಿದ್ದೇವೆ,” ಎಂದು ತಿಳಿಸಿದರು.
ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ್ ಮತ್ತು ಶಾಸಕ ಬಿ.ಪಿ. ಹರೀಶ್ ಅವರು ದಾವಣಗೆರೆ ಜಿಲ್ಲೆಯ ಸಂಘಟನಾ ಕಾರ್ಯಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕರನ್ನು ಭೇಟಿಯಾಗಿದ್ದಾರೆ ಎಂದು ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.