ಬೆಂಗಳೂರು: ನಗರದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ನಮ್ಮ ಮೆಟ್ರೋದ ಹಳದಿ ಮಾರ್ಗದ ರೈಲು ಸೇವೆ ಇಂದಿನಿಂದ ಪ್ರಾರಂಭಗೊಂಡಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಈ ಮಾರ್ಗವು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ವಿಸ್ತರಿಸಿದ್ದು, ದೀರ್ಘಕಾಲದ ರಸ್ತೆ ದಟ್ಟಣೆ ಸಮಸ್ಯೆಗೆ ಪರಿಹಾರ ನೀಡಲಿದೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಪ್ರಕಟಣೆಯಲ್ಲಿ ಈ ವಿವರಗಳನ್ನು ಬಿಡುಗಡೆ ಮಾಡಿದೆ.
ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 6:30ರಿಂದ ರೈಲು ಸೇವೆ ಆರಂಭವಾಗಲಿದ್ದು, ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಮೊದಲ ರೈಲು 6:30ಕ್ಕೆ ಹಾಗೂ ಆರ್‌ವಿ ರಸ್ತೆಯಿಂದ 7:10ಕ್ಕೆ ಹೊರಡಲಿದೆ. ಪ್ರತಿ 25 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸುವುದರಿಂದ ಪ್ರಯಾಣಿಕರಿಗೆ ಸುಲಭವಾಗಲಿದೆ. ಒಟ್ಟು 16 ನಿಲ್ದಾಣಗಳೊಂದಿಗೆ (ಟರ್ಮಿನಲ್ ನಿಲ್ದಾಣಗಳು ಸೇರಿ) ಒಂದು ದಿಕ್ಕಿನ ಪ್ರಯಾಣ ಸಮಯ ಸುಮಾರು 35 ನಿಮಿಷಗಳು. ಕೊನೆಯ ರೈಲುಗಳು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ರಾತ್ರಿ 10:42ಕ್ಕೆ ಮತ್ತು ಆರ್‌ವಿ ರಸ್ತೆಯಿಂದ 11:55ಕ್ಕೆ ಹೊರಡಲಿವೆ. ರಾತ್ರಿ 10 ಗಂಟೆಯ ನಂತರ ಸಂಚಾರದ ಅವಧಿ ಕಡಿಮೆಯಾಗಲಿದೆ. ಭಾನುವಾರಗಳಲ್ಲಿ ಸೇವೆ ಬೆಳಗ್ಗೆ 7 ಗಂಟೆಗೆ ಶುರುವಾಗಲಿದ್ದು, ಸಾಮಾನ್ಯ ದಿನಗಳಂತೆಯೇ ಮುಂದುವರಿಯಲಿದೆ.
ಟರ್ಮಿನಲ್ ನಿಲ್ದಾಣಗಳ ನಡುವಿನ ಪ್ರಯಾಣ ಶುಲ್ಕ 60 ರೂಪಾಯಿಗಳು. ಟೋಕನ್‌ಗಳು, NCMC ಕಾರ್ಡ್‌ಗಳು, ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್‌ಗಳು ಮತ್ತು QR ಟಿಕೆಟ್‌ಗಳು ಲಭ್ಯವಿರುವುದರೊಂದಿಗೆ, ಐಫೋನ್ ಬಳಕೆದಾರರು ಆ್ಯಪಲ್ ಸ್ಟೋರ್‌ನಿಂದ ನಮ್ಮ ಮೆಟ್ರೋ ಆ್ಯಪ್ ಡೌನ್‌ಲೋಡ್ ಮಾಡಿ QR ಟಿಕೆಟ್ ಖರೀದಿ ಅಥವಾ ಕಾರ್ಡ್ ರೀಚಾರ್ಜ್ ಮಾಡಬಹುದು.
ಹಳದಿ ಮಾರ್ಗವು ಪೂರ್ಣ ಕಾರ್ಯಾರಂಭದ ನಂತರ ಪ್ರತಿದಿನ 8 ಲಕ್ಷ ಪ್ರಯಾಣಿಕರಿಗೆ ಉಪಯೋಗವಾಗಲಿದ್ದು, ಬೊಮ್ಮಸಂದ್ರ ಮತ್ತು ಆರ್‌ವಿ ರಸ್ತೆ ನಡುವಿನ ಪ್ರಯಾಣ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಇನ್ಫೋಸಿಸ್ (ಕೋನಪ್ಪನ ಅಗ್ರಹಾರ) ಮತ್ತು ಬಯೋಕಾನ್ (ಹೆಬ್ಬಗೋಡಿ) ನಂತಹ ಕಾರ್ಪೊರೇಟ್ ಕ್ಯಾಂಪಸ್‌ಗಳಿಗೆ ನೇರ ಸಂಪರ್ಕ ಒದಗಿಸಲಿದೆ. ಹಸಿರು ಮಾರ್ಗ (ಆರ್‌ವಿ ರಸ್ತೆ), ಭವಿಷ್ಯದ ಪಿಂಕ್ ಮಾರ್ಗ (ಜಯದೇವ ಆಸ್ಪತ್ರೆ) ಮತ್ತು ನೀಲಿ ಮಾರ್ಗ (ಸಿಲ್ಕ್ ಬೋರ್ಡ್) ಗಳೊಂದಿಗೆ ಇಂಟರ್ಚೇಂಜ್ ನಿಲ್ದಾಣಗಳು ನಗರದ ಸಂಪರ್ಕವನ್ನು ಬಲಪಡಿಸಲಿವೆ. ಇದು ಬೆಂಗಳೂರನ್ನು ಸುಸ್ಥಿರ ನಗರವನ್ನಾಗಿ ಮಾರ್ಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಆರ್‌ವಿ ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ರೈಲು ಕಾರ್ಯಾಚರಣೆ ಸೋಮವಾರ, ಆಗಸ್ಟ್ 11, 2025 ರಂದು ಬೆಳಿಗ್ಗೆಯಿಂದ ಪ್ರಾರಂಭವಾಗಲಿದೆ.
ಹೆಚ್ಚಿನ ವಿವರಗಳಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ. pic.twitter.com/W7eOppV2wE— ನಮ್ಮ ಮೆಟ್ರೋ (@OfficialBMRCL) August 10, 2025
2026ರ ಆರಂಭದಲ್ಲಿ ಪೂರ್ಣ ಕಾರ್ಯಾಚರಣೆ ನಿರೀಕ್ಷಿಸಲಾಗಿದ್ದು, ದಕ್ಷಿಣ ಬೆಂಗಳೂರಿನ ಆರ್ಥಿಕ ಅವಕಾಶಗಳನ್ನು ವಿಸ್ತರಿಸುವುದರೊಂದಿಗೆ ಸಂಚಾರ ಸುಗಮಗೊಳಿಸಿ ನಾಗರಿಕರ ಜೀವನ ಗುಣಮಟ್ಟವನ್ನು ಉನ್ನತೀಕರಿಸಲಿದೆ.
ಯಾವ್ಯಾವ ನಿಲ್ದಾಣಗಳಲ್ಲಿ ರೈಲು ನಿಲ್ಲಲಿದೆ?
ಆರ್‌ವಿ ರಸ್ತೆ (ಹಸಿರು ಮಾರ್ಗ ಇಂಟರ್ಚೇಂಜ್), ರಾಗಿಗುಡ್ಡ, ಜಯದೇವ ಆಸ್ಪತ್ರೆ (ಭವಿಷ್ಯದ ಪಿಂಕ್ ಮಾರ್ಗ ಇಂಟರ್ಚೇಂಜ್), ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್ (ಭವಿಷ್ಯದ ನೀಲಿ ಮಾರ್ಗ ಇಂಟರ್ಚೇಂಜ್), ಬೊಮ್ಮನಹಳ್ಳಿ, ಹೊಂಗಸಂದ್ರ, ಕುಡ್ಲುಗೇಟ್, ಸಿಂಗಸಂದ್ರ, ಹೊಸರಸ್ತೆ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಹುಸ್ಕೂರು ರಸ್ತೆ, ಹೆಬ್ಬಗೋಡಿ, ಬೊಮ್ಮಸಂದ್ರ (ಟರ್ಮಿನಲ್).
ಹಳದಿ ಮಾರ್ಗ ಸಾಗಿ ಬರೋದು ಹೇಗೆ ದರ ಎಷ್ಟು?
ಆರ್ ವಿ ರೋಡ್ – ರಾಗಿಗುಡ್ಡ – 10 ರೂಪಾಯಿ
ಆರ್ ವಿ ರೋಡ್- ಜಯದೇವ ಆಸ್ಪತ್ರೆ -10 ರೂಪಾಯಿ
ಆರ್ ವಿ ರೋಡ್ – ಬಿಟಿಎಂ ಲೇಔಟ್ – 20 ರೂಪಾಯಿ
ಆರ್ ವಿ ರೋಡ್- ಸೆಂಟ್ರಲ್ ಸಿಲ್ಕ್ ಬೋರ್ಡ್ – 20 ರೂಪಾಯಿ
ಆರ್ ವಿ ರೋಡ್ – ಬೊಮ್ಮನಹಳ್ಳಿ – 30 ರೂಪಾಯಿ
ಆರ್ ವಿ ರೋಡ್ – ಕೂಡ್ಲುಗೇಟ್- 40 ರೂಪಾಯಿ
ಆರ್ ವಿ ರೋಡ್- ಸಿಂಗಸಂಧ್ರ – 50 ರೂಪಾಯಿ
ಆರ್ ವಿ ರೋಡ್ – ಎಲೆಕ್ಟ್ರಾನಿಕ್ ಸಿಟಿ – 60 ರೂಪಾಯಿ
ಆರ್ ವಿ ರೋಡ್- ಬೊಮ್ಮಸಂದ್ರ – 60 ರೂಪಾಯಿ
ಸಿಲ್ಕ್ ಬೋರ್ಡ್ – ಬೊಮ್ಮಸಂದ್ರ – 60 ರೂಪಾಯಿ
ಪ್ರಯಾಣಿಕರಿಗೆ ಸೂಚನೆ: ಸಮಯಪಾಲನೆ ಮಾಡಿ, ಟಿಕೆಟ್ ಖರೀದಿಸಿ ಮತ್ತು ನಿಲ್ದಾಣಗಳಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಿ. ಶುಭ ಪ್ರಯಾಣ!