ಬೆಂಗಳೂರಿನ ಈ ರಸ್ತೆಯಲ್ಲಿ ಇಂದಿನಿಂದ 3 ತಿಂಗಳು ಸಂಚಾರ ನಿಷೇಧ

ಕೆಆರ್ ಪುರಂ ಬ್ರಿಡ್ಜ್ ಕಾಮಗಾರಿ: ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!

1425 (21)

ಬೆಂಗಳೂರು: ಕೆಆರ್ ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಬೆನ್ನಿಗಾನಹಳ್ಳಿಯಿಂದ ಕಸ್ತೂರಿನಗರಕ್ಕೆ ಸಂಪರ್ಕಿಸುವ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ರೈಲ್ವೆ ಇಲಾಖೆಯಿಂದ ಸೇತುವೆ (ಬ್ರಿಡ್ಜ್) ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಈ ಕಾರಣದಿಂದ ಇಂದಿನಿಂದ ಮುಂದಿನ ಮೂರು ತಿಂಗಳು (90 ದಿನಗಳ) ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಪರ್ಯಾಯ ಮಾರ್ಗಗಳನ್ನು ಒದಗಿಸಲಾಗಿದೆ ಎಂದು ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ ತಿಳಿಸಿದ್ದಾರೆ.

ಪರ್ಯಾಯ ಮಾರ್ಗಗಳ ವಿವರ
  1. ಹಳೆ ಮದ್ರಾಸ್ ರಸ್ತೆಯಿಂದ ಕಸ್ತೂರಿನಗರಕ್ಕೆ: ಬೆನ್ನಿಗಾನಹಳ್ಳಿ ರೈಲ್ವೆ ಬ್ರಿಡ್ಜ್‌ನಿಂದ ಕಸ್ತೂರಿನಗರಕ್ಕೆ ತೆರಳುವ ವಾಹನ ಸವಾರರು ಡಿಓಟಿ (DOT) ಬೈಪಾಸ್ ಮೂಲಕ ಹೆಬ್ಬಾಳವನ್ನು ತಲುಪಿ, ಅಲ್ಲಿಂದ ಕಸ್ತೂರಿನಗರಕ್ಕೆ ಸಂಚರಿಸಬಹುದು.

  2. ಕಸ್ತೂರಿನಗರದಿಂದ ಹಳೆ ಮದ್ರಾಸ್ ರಸ್ತೆಗೆ: ಕಸ್ತೂರಿನಗರದಿಂದ ಹಳೆ ಮದ್ರಾಸ್ ರಸ್ತೆಗೆ ತೆರಳುವವರು ಸದಾನಂದನಗರದಿಂದ ಎನ್‌ಜಿಇಎಫ್ (NGEF) ಸಿಗ್ನಲ್ ಮೂಲಕ ಸಂಚರಿಸಬಹುದು.

ಸಾರ್ವಜನಿಕರು ಮತ್ತು ವಾಹನ ಸವಾರರು ಈ ಪರ್ಯಾಯ ಮಾರ್ಗಗಳನ್ನು ಬಳಸಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ ಮನವಿ ಮಾಡಿದ್ದಾರೆ.

ಇಂದು ಸಂಚಾರ ಸಂಪರ್ಕ ದಿವಸ

ಇಂದು ಬೆಳಿಗ್ಗೆ 11 ಗಂಟೆಗೆ ಕೆಆರ್ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ “ಸಂಚಾರ ಸಂಪರ್ಕ ದಿವಸ” ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಥಳೀಯ ನಾಗರಿಕರು ಸಂಚಾರ ಸಂಬಂಧಿತ ದೂರು, ಅಭಿಪ್ರಾಯಗಳು, ಸಲಹೆಗಳನ್ನು ಹಂಚಿಕೊಂಡು ಪರಿಹಾರಕ್ಕಾಗಿ ಮುಕ್ತ ಚರ್ಚೆಯಲ್ಲಿ ಭಾಗವಹಿಸಬಹುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Exit mobile version