ಬೆಂಗಳೂರು, ಜುಲೈ 1: ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದ ರೌಡಿ ಶೀಟರ್ ಕೊಲೆ ಪ್ರಕರಣದ ತನಿಖೆ ವೇಳೆ ಮಹಜರು ನಡೆಸಲು ಕರೆದೊಯ್ಯಲಾಗಿದ್ದ ಪ್ರಮುಖ ಆರೋಪಿ ಸಂತೋಷ್ ಅಲಿಯಾಸ್ ಬ್ಯಾಟ್ ಸಂತು ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ವಿಭಾಗದ ಡಿಸಿಪಿ ಡಾ. ಕೆ. ವಂಶಿಕೃಷ್ಣ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಂಶಿಕೃಷ್ಣ ಅವರು, ಜೂನ್ 27ರಂದು ಬೆಂಗಳೂರಿನ ಜೆಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾಜು ಎಂಬಾತನ ಮೇಲೆ ನಾಲ್ವರು ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದರು ಎಂದು ಹೇಳಿದರು. ಪ್ರಕರಣದ ತನಿಖೆಗೆ ಎಂಟು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಕೇವಲ ಎರಡು ದಿನಗಳಲ್ಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಬಂಧಿತ ಆರೋಪಿಗಳನ್ನು ನೈಸ್ ರಸ್ತೆ ಸಮೀಪ ಮಹಜರು ನಡೆಸಲು ಕರೆದೊಯ್ಯಲಾಗಿತ್ತು. ಮಹಜರು ಮುಗಿಸಿ ವಾಪಸ್ ತೆರಳುವ ವೇಳೆ ಪ್ರಮುಖ ಆರೋಪಿ ಏಕಾಏಕಿ ಪೊಲೀಸರ ಮೇಲೆ ಕಲ್ಲು ತೂರಿ ಹಲ್ಲೆ ನಡೆಸಿದ್ದಾನೆ. ಮಹಿಳಾ ಪೊಲೀಸ್ ಅಧಿಕಾರಿ ಸೇರಿದಂತೆ ಹಲವು ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಡಿಸಿಪಿ ವಿವರಿಸಿದರು.
ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸ್ಥಳದಲ್ಲಿದ್ದ ಪಿಎಸ್‌ಐ ಸಮನ್ವಯ ಮೊದಲು ಆರೋಪಿಗೆ ಶರಣಾಗುವಂತೆ ಸೂಚಿಸಿದ್ದಾರೆ, ನಂತರ ಎಚ್ಚರಿಕೆಯಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆದರೂ ಆರೋಪಿ ಮತ್ತೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಗುಂಡೇಟಿಗೆ ಒಳಗಾದ ಆರೋಪಿ ಕೋಣನಕುಂಟೆಯ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ಈಗಾಗಲೇ 10ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ರಾಜು ಕೊಲೆ ನಡೆದ ದಿನವೇ ಕೆ.ಆರ್.ಪುರಂ ಪ್ರದೇಶದಲ್ಲಿ ಪೆಪ್ಪರ್ ಸ್ಪ್ರೇ ಬಳಸಿ ಚೈನ್ ಸ್ನ್ಯಾಚಿಂಗ್ ನಡೆಸಿದ್ದಾನೆ ಎಂಬ ಆರೋಪವೂ ಈತನ ಮೇಲಿದೆ ಎಂದು ಡಿಸಿಪಿ ತಿಳಿಸಿದರು.
ಬಂಧಿತ ಉಳಿದ ಮೂವರು ಆರೋಪಿಗಳ ಪೈಕಿ ಇಬ್ಬರ ವಿರುದ್ಧವೂ ಈಗಾಗಲೇ ಎರಡು-ಮೂರು ಪ್ರಕರಣಗಳು ದಾಖಲಾಗಿದ್ದು, ಮತ್ತೋರ್ವ ಆರೋಪಿ ಹೊಸಬನಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದರು. ಈ ಕೊಲೆ ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ, ಆರೋಪಿಗಳ ಅಪರಾಧ ಹಿನ್ನೆಲೆ ಮತ್ತು ಇತರ ಸಂಪರ್ಕಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಡಿಸಿಪಿ ಡಾ. ಕೆ. ವಂಶಿಕೃಷ್ಣ ಮಾಹಿತಿ ನೀಡಿದ್ದಾರೆ.
