ಬೆಂಗಳೂರು, ಜುಲೈ 1: ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದ ರೌಡಿ ಶೀಟರ್ ಕೊಲೆ ಪ್ರಕರಣದ ತನಿಖೆ ವೇಳೆ ಮಹಜರು ನಡೆಸಲು ಕರೆದೊಯ್ಯಲಾಗಿದ್ದ ಪ್ರಮುಖ ಆರೋಪಿ ಸಂತೋಷ್ ಅಲಿಯಾಸ್ ಬ್ಯಾಟ್ ಸಂತು ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದ ಘಟನೆ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಜೆ.ಪಿ.ನಗರ ವ್ಯಾಪ್ತಿಯಲ್ಲಿ ನಡೆದ ರೌಡಿ ಶೀಟರ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಸಂತೋಷ್‌ನನ್ನು, ತಲಘಟ್ಟಪುರದ ಸಮೀಪ ಕೊಲೆ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಮಹಜರು ನಡೆಸುವ ಉದ್ದೇಶದಿಂದ ಸ್ಥಳಕ್ಕೆ ಕರೆದೊಯ್ಯಲಾಗಿತ್ತು.
ಮಹಜರು ವೇಳೆ ಆರೋಪಿಯು ಮಾರಕಾಸ್ತ್ರಗಳನ್ನು ತೋರಿಸುವ ಸಂದರ್ಭದಲ್ಲಿ ಏಕಾಏಕಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ. ಈ ವೇಳೆ ಇನ್ಸ್‌ಪೆಕ್ಟರ್ ಹರೀಶ್ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ.
ಪರಿಸ್ಥಿತಿ ನಿಯಂತ್ರಿಸಲು ಸ್ಥಳದಲ್ಲಿದ್ದ ಪಿಎಸ್‌ಐ ಸವಿನಯ ಆರೋಪಿಗೆ ಶರಣಾಗುವಂತೆ ಹಲವು ಬಾರಿ ಸೂಚನೆ ನೀಡಿದ್ದಾರೆ. ಆದರೂ ಆರೋಪಿ ದಾಳಿಯ ಯತ್ನವನ್ನು ಮುಂದುವರಿಸಿದ್ದಾನೆ ಎನ್ನಲಾಗಿದೆ. ಮೊದಲಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಪಿಎಸ್‌ಐ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಆದರೂ ಆರೋಪಿ ಮತ್ತೆ ಮಾರಕಾಸ್ತ್ರದೊಂದಿಗೆ ಪೊಲೀಸರತ್ತ ಮುನ್ನುಗ್ಗಿದ ಹಿನ್ನೆಲೆಯಲ್ಲಿ, ಆತ್ಮರಕ್ಷಣೆ ಹಾಗೂ ಪರಿಸ್ಥಿತಿ ನಿಯಂತ್ರಿಸುವ ಉದ್ದೇಶದಿಂದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಸಂತೋಷ್‌ಗೆ ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ. ಮಹಜರು ವೇಳೆ ನಡೆದ ಸಂಪೂರ್ಣ ಘಟನೆಯ ಕುರಿತು ಕಾನೂನು ಪ್ರಕ್ರಿಯೆ ಅನುಸರಿಸಿ ವರದಿ ಸಿದ್ಧಪಡಿಸಲಾಗುತ್ತಿದೆ.
ಬೆಂಗಳೂರಿನ ಜೆಪಿ ನಗರದಲ್ಲಿ ರೌಡಿಶೀಟರ್ ರಾಜು ಭಾಯ್ (ರಾಜು ಅಲಿಯಾಸ್ ಹಲ್ಮುರ್ಕ್ ರಾಜಾ) ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಸಂಜೆ ವೇಳೆ ಟೀ ಕುಡಿದು ಬರುತ್ತಿದ್ದ ರಾಜು ಮೇಲೆ ನಾಲ್ಕೈದು ಮಂದಿ ದುಷ್ಕರ್ಮಿಗಳು ದಾಳಿ ನಡೆಸಿ ಪರಾರಿಯಾಗಿದ್ದು, ಗಂಭೀರವಾಗಿ ಗಾಯಗೊಂಡ ರಾಜು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಹತ್ತು ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ರಾಜು. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದರು.
