ನಮ್ಮ ಮೆಟ್ರೋ ದೋಷ: BMRCLಗೆ ತನಿಖೆ ನಡೆಸುವಂತೆ ಕೇಂದ್ರದ ಆದೇಶ

Untitled design (13)

ಬೆಂಗಳೂರು, ಜುಲೈ 1: ನಮ್ಮ ಮೆಟ್ರೋದಲ್ಲಿ ಇತ್ತೀಚೆಗೆ ಪದೇ ಪದೇ ಸಂಭವಿಸುತ್ತಿರುವ ತಾಂತ್ರಿಕ ದೋಷಗಳು ಮತ್ತು ಸೇವಾ ವ್ಯತ್ಯಯಗಳು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಕೇಂದ್ರ ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು (Chief Commissioner of Railway Safety) ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಕಳೆದ ಎರಡೂವರೆ ವರ್ಷದಿಂದ ಮೂರು ವರ್ಷಗಳಲ್ಲಿ ನಮ್ಮ ಮೆಟ್ರೋದಲ್ಲಿ ಸಂಭವಿಸಿರುವ ಎಲ್ಲಾ ತಾಂತ್ರಿಕ ವೈಫಲ್ಯಗಳು, ಸೇವಾ ವ್ಯತ್ಯಯಗಳು ಹಾಗೂ ಕಾರ್ಯಾಚರಣೆಯಲ್ಲಿನ ಸಮಸ್ಯೆಗಳ ಕುರಿತು ವಿವರವಾದ ವರದಿಯನ್ನು ಶೀಘ್ರದಲ್ಲೇ ಸಲ್ಲಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಈ ಬೆಳವಣಿಗೆಗೆ ಪ್ರಮುಖ ಕಾರಣ ಎಂದರೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು, ಜೂನ್ 23ರಂದು ಪರ್ಪಲ್ ಲೈನ್‌ನಲ್ಲಿ ಸಂಭವಿಸಿದ ತಾಂತ್ರಿಕ ದೋಷದ ಕುರಿತು ಜೂನ್ 25ರಂದು ಕೇಂದ್ರ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆದು ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದರು.

ಈ ದೂರಿಗೆ ಪ್ರತಿಕ್ರಿಯಿಸಿರುವ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತ ಜನಕ್ ಕುಮಾರ್ ಗರ್ಗ್, ಜೂನ್ 23ರ ಘಟನೆ ಮಾತ್ರವಲ್ಲದೆ, ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಎಲ್ಲಾ ತಾಂತ್ರಿಕ ವೈಫಲ್ಯಗಳು ಮತ್ತು ಸೇವಾ ವ್ಯತ್ಯಯಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಜೊತೆಗೆ, ಮೆಟ್ರೋ ಕಾರ್ಯಾಚರಣೆ ಹಾಗೂ ನಿರ್ವಹಣಾ ವ್ಯವಸ್ಥೆಯ ಆಡಿಟ್ ನಡೆಸುವಂತೆಯೂ ಸೂಚನೆ ನೀಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್ (X) ಖಾತೆಯಲ್ಲಿ ಕೇಂದ್ರದ ಪತ್ರವನ್ನು ಹಂಚಿಕೊಂಡಿರುವ ತೇಜಸ್ವಿ ಸೂರ್ಯ, ಬಿಎಂಆರ್‌ಸಿಎಲ್ ಹಾಗೂ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಟ್ಯಾಗ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“2024ರಿಂದೀಚೆಗೆ ನಮ್ಮ ಮೆಟ್ರೋದಲ್ಲಿ ಸುಮಾರು 20 ಬಾರಿ ಸೇವಾ ವ್ಯತ್ಯಯಗಳು ಸಂಭವಿಸಿವೆ. ಇದು ವ್ಯವಸ್ಥಿತ ವೈಫಲ್ಯದ ಸಂಕೇತವಾಗಿದೆ. ಪ್ರಯಾಣಿಕರ ಸುರಕ್ಷತೆ, ವಿಶ್ವಾಸ ಹಾಗೂ ತಡೆರಹಿತ ಸೇವೆ ಒದಗಿಸುವುದು ಬಿಎಂಆರ್‌ಸಿಎಲ್ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಹೀಗಾಗಿ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವ ಅಗತ್ಯವಿದೆ” ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

Exit mobile version