ಬೆಂಗಳೂರಿನ ಭಾರತಿನಗರದಲ್ಲಿ ರೌಡಿಶೀಟರ್ ಶಿವಪ್ರಕಾಶ್ (ಬಿಕ್ಲು ಶಿವ)ನ ಬರ್ಬರ ಕೊಲೆ ಪ್ರಕರಣದಲ್ಲಿ ಕೆ.ಆರ್. ಪುರಂ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಸೇರಿದಂತೆ ಐವರ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೊಲೆಗೆ ಶಾಸಕ ಭೈರತಿ ಬಸವರಾಜ್ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಬಿಕ್ಲು ಶಿವನ ತಾಯಿ ವಿಜಯಲಕ್ಷ್ಮೀ ಅವರ ದೂರಿನ ಆಧಾರದ ಮೇಲೆ ಜಗದೀಶ್, ಕಿರಣ್, ವಿಮಲ್, ಅನಿಲ್, ಮತ್ತು ಭೈರತಿ ಬಸವರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಮಂಗಳವಾರ (ಜುಲೈ 15) ರಾತ್ರಿ 8:10ರ ಸುಮಾರಿಗೆ ಬಿಕ್ಲು ಶಿವ ತನ್ನ ಮನೆಯಿಂದ ಹೊರಗೆ ಬಂದು ಮೀನೀ ಅವೆನ್ಯೂ ರಸ್ತೆಯಲ್ಲಿ ನಿಂತಿದ್ದಾಗ, ಸ್ಕಾರ್ಪಿಯೋ ಕಾರು ಮತ್ತು ದ್ವಿಚಕ್ರ ವಾಹನದಲ್ಲಿ ಬಂದ 8-9 ದುಷ್ಕರ್ಮಿಗಳ ಗುಂಪು ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದೆ. ಕಬ್ಬಿಣದ ರಾಡ್‌ಗಳು ಮತ್ತು ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಆರೋಪಿಗಳು, ಶಿವನ ಸ್ನೇಹಿತ ಇಮ್ರಾನ್ ಖಾನ್‌ನನ್ನೂ ಗಾಯಗೊಳಿಸಿದ್ದಾರೆ. ಜನರು ಗುಂಪುಗೂಡಿದಾಗ ದಾಳಿಕೋರರು ವಾಹನಗಳಲ್ಲಿ ಪರಾರಿಯಾಗಿದ್ದಾರೆ. ಶಿವನ ತಲೆಯನ್ನು ಒಡೆದು, ಮುಖವನ್ನು ವಿರೂಪಗೊಳಿಸಿ ಕೊಲೆ ಮಾಡಲಾಗಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಜಮೀನು ವಿವಾದದ ಹಿನ್ನೆಲೆ
ಕಿತಗನೂರಿನಲ್ಲಿ ಶಿವಪ್ರಕಾಶ್ ಖರೀದಿಸಿದ್ದ ಜಮೀನಿಗೆ ಸಂಬಂಧಿಸಿದಂತೆ ಭೈರತಿ ಬಸವರಾಜ್ ಮತ್ತು ಆತನ ಸಹಚರರಾದ ಜಗದೀಶ್ ಮತ್ತು ಕಿರಣ್‌ರೊಂದಿಗೆ ವಿವಾದ ಇತ್ತು. ಶಿವಪ್ರಕಾಶ್ ಜಮೀನಿಗೆ ಜನರಲ್ ಪವರ್ ಆಫ್ ಅಟಾರ್ನಿ (GPA) ಪಡೆದಿದ್ದು, ಫೆಬ್ರವರಿ 11ರಂದು ಜಗದೀಶ್ ಮತ್ತು ಕಿರಣ್ ಆ ಜಮೀನಿನಲ್ಲಿ ಒಡಮಾಡಿ, ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿಯನ್ನು ಹೊರಗಟ್ಟಿದ್ದರು. ಶಿವನಿಗೆ ಜಮೀನನ್ನು ಜಗದೀಶ್‌ಗೆ ವರ್ಗಾಯಿಸುವಂತೆ ಬೆದರಿಕೆಯನ್ನೂ ಹಾಕಿದ್ದರು. ಈ ಕುರಿತು ಶಿವ ಈ ಹಿಂದೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದ, ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಭೈರತಿ ಬಸವರಾಜ್ ಹೇಳಿದ್ದೇನು?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭೈರತಿ ಬಸವರಾಜ್, “ನನಗೆ ಈ ಕೊಲೆ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ದೂರು ದಾಖಲಾದ ತಕ್ಷಣ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶ ಇರಬಹುದು. ದೇವರ ಸಾಕ್ಷಿಯಾಗಿ ನಾನು ಈ ಘಟನೆಗೆ ಸಂಬಂಧವಿಲ್ಲ. ಕಾನೂನು ಹೋರಾಟದ ಮೂಲಕ ಸತ್ಯಾಸತ್ಯತೆಯನ್ನು ತಿಳಿಗೊಳಿಸುತ್ತೇನೆ,” ಎಂದು ಗ್ಯಾರಂಟಿ ನ್ಯೂಸ್‌ಗೆ ಹೇಳಿದ್ದಾರೆ.
ಪೊಲೀಸರು ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 ಮತ್ತು 190ರಡಿ ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆ ಮುಂದುವರಿದಂತೆ ಇನ್ನಷ್ಟು ಆರೋಪಿಗಳ ಹೆಸರು ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಪ್ರಕಾಶ್‌ಗೆ 2006ರಿಂದ ರೌಡಿ ಶೀಟ್ ತೆರೆಯಲಾಗಿತ್ತು ಮತ್ತು 11 ಕ್ರಿಮಿನಲ್ ಪ್ರಕರಣಗಳಲ್ಲಿ ಆತನ ಹೆಸರು ದಾಖಲಾಗಿತ್ತು.