ಬೆಂಗಳೂರು, (ಜೂನ್ 21): ಬೆಂಗಳೂರು ನಗರದ ಹಲವು ಪ್ರತಿಷ್ಠಿತ ಶಾಲೆಗಳು ತಮ್ಮ ಆವರಣದಲ್ಲಿ ಸ್ವಿಗ್ಗಿ, ಜೊಮ್ಯಾಟೊ ಸೇರಿದಂತೆ ಆನ್‌ಲೈನ್ ಫುಡ್ ಡೆಲಿವರಿ ಆಪ್‌ಗಳ ಮೂಲಕ ಆಹಾರ ಆರ್ಡರ್ ಮಾಡುವುದನ್ನು ನಿಷೇಧಿಸಲು ಮುಂದಾಗಿವೆ. ಬನಶಂಕರಿಯಲ್ಲಿರುವ ವಿದ್ಯಾಶಿಲ್ಪ ಶಾಲೆ ಇತ್ತೀಚೆಗೆ ಪೋಷಕರಿಗೆ ಸುತ್ತೋಲೆ ಹೊರಡಿಸಿ ಈ ಹೊಸ ನಿಯಮವನ್ನು ಜಾರಿಗೊಳಿಸಿರುವುದು ಗಮನ ಸೆಳೆದಿದೆ. ಇದೀಗ ನಗರದ ಇತರ ಪ್ರಮುಖ ಶಿಕ್ಷಣ ಸಂಸ್ಥೆಗಳೂ ಇದೇ ಕ್ರಮವನ್ನು ಅನುಸರಿಸುತ್ತಿವೆ.
ಬೆಂಗಳೂರಿನ ಹಲವು ಪ್ರಮುಖ ಶಾಲೆಗಳಲ್ಲಿ ಫುಡ್ ಡೆಲಿವರಿ ಆಪ್ ನಿಷೇಧ
ವಿದ್ಯಾರ್ಥಿಗಳ ಆರೋಗ್ಯ ಕಾಪಾಡಲು ಜಂಕ್ ಫುಡ್ ನಿಯಂತ್ರಣ
ಶಿಕ್ಷಕರು ಹಾಗೂ ಸಿಬ್ಬಂದಿಗೂ ಆನ್‌ಲೈನ್ ಆಹಾರ ಆರ್ಡರ್‌ಗೆ ನಿರ್ಬಂಧ
ಶಾಲಾ ಭದ್ರತೆ ಮತ್ತು ಶಿಸ್ತು ಕಾಪಾಡಲು ಹೊಸ ನಿಯಮ
ಫುಡ್ ಡೆಲಿವರಿ ನಿಷೇಧಕ್ಕೆ ಕಾರಣ?
ಶಾಲಾ ಆಡಳಿತ ಮಂಡಳಿಗಳ ಪ್ರಕಾರ, ವಿದ್ಯಾರ್ಥಿಗಳು ಶಾಲಾ ಸಮಯದಲ್ಲಿ ಹೊರಗಿನಿಂದ ಆರ್ಡರ್ ಮಾಡುವ ಆಹಾರ ಹೆಚ್ಚಾಗಿ ಜಂಕ್ ಫುಡ್ ಆಗಿದ್ದು, ಅವುಗಳಲ್ಲಿ ಅತಿಯಾದ ಎಣ್ಣೆ, ಉಪ್ಪು ಹಾಗೂ ಪ್ರಿಸರ್ವೇಟಿವ್‌ಗಳು ಇರುವ ಸಾಧ್ಯತೆ ಇದೆ. ಇಂತಹ ಆಹಾರಗಳು ಮಕ್ಕಳ ಆರೋಗ್ಯದ ಮೇಲೆ ದೀರ್ಘಕಾಲಿಕ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಲೆಗಳು ಸ್ಪಷ್ಟಪಡಿಸಿವೆ.
ಇದರ ಜೊತೆಗೆ, ಶಾಲಾ ವಾತಾವರಣದಲ್ಲಿ ಸಮಾನತೆ ಕಾಪಾಡುವ ಉದ್ದೇಶವೂ ಈ ನಿರ್ಧಾರದ ಹಿಂದಿದೆ. ಕೆಲ ವಿದ್ಯಾರ್ಥಿಗಳು ಮನೆಯಿಂದ ತಂದ ಸಾಮಾನ್ಯ ಊಟ ಸೇವಿಸುವಾಗ, ಇತರರು ಪಿಜ್ಜಾ, ಬರ್ಗರ್ ಮುಂತಾದ ದುಬಾರಿ ಆಹಾರಗಳನ್ನು ಆರ್ಡರ್ ಮಾಡುವುದರಿಂದ ಮಕ್ಕಳಲ್ಲಿ ತಾರತಮ್ಯ ಹಾಗೂ ಅನಗತ್ಯ ಆಕರ್ಷಣೆ ಉಂಟಾಗಬಹುದು. ಇದು ಪೋಷಕರ ಮೇಲೂ ಹೆಚ್ಚುವರಿ ಒತ್ತಡವನ್ನು ಸೃಷ್ಟಿಸುತ್ತದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭದ್ರತೆಯ ವಿಚಾರವೂ ಶಾಲೆಗಳ ಪ್ರಮುಖ ಕಾಳಜಿಯಾಗಿದೆ. ಅಪರಿಚಿತ ಡೆಲಿವರಿ ಸಿಬ್ಬಂದಿ ಪದೇ ಪದೇ ಶಾಲಾ ಆವರಣಕ್ಕೆ ಪ್ರವೇಶಿಸುವುದು ಸುರಕ್ಷತಾ ದೃಷ್ಟಿಯಿಂದ ಸೂಕ್ತವಲ್ಲ ಎಂದು ಆಡಳಿತ ಮಂಡಳಿಗಳು ಹೇಳಿವೆ. ಅಲ್ಲದೆ, ಪ್ರತಿದಿನ ಹಲವು ಆಹಾರ ಪಾರ್ಸೆಲ್‌ಗಳನ್ನು ತರಗತಿಗಳಿಗೆ ತಲುಪಿಸುವುದು ಶಾಲೆಯ ಶಿಸ್ತು, ಸಮಯ ನಿರ್ವಹಣೆ ಮತ್ತು ಆಡಳಿತಾತ್ಮಕ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ.
ಪೋಷಕರು ಅನಿವಾರ್ಯ ಸಂದರ್ಭಗಳಲ್ಲಿ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗದಿದ್ದರೆ, ಆರೋಗ್ಯಕರ ಆಹಾರವನ್ನು ಹೊರಗಿನಿಂದ ಪಡೆದು ಸಾಮಾನ್ಯ ಲಂಚ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಮಕ್ಕಳಿಗೆ ಕಳುಹಿಸುವಂತೆ ಶಾಲೆಗಳು ಮನವಿ ಮಾಡಿವೆ.
ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗೂ ಆಹಾರ ಆರ್ಡರ್‌ಗೆ ನಿರ್ಬಂಧ:
ವಿಶೇಷವೆಂದರೆ, ವಿದ್ಯಾರ್ಥಿಗಳಿಗೆ ಉತ್ತಮ ಮಾದರಿಯಾಗುವ ಉದ್ದೇಶದಿಂದ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗೂ ಶಾಲಾ ಆವರಣದಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಸೇವೆಗಳನ್ನು ಬಳಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಆರೋಗ್ಯಕರ ಆಹಾರ ಪದ್ಧತಿ, ಸಮಾನತೆ ಮತ್ತು ಭದ್ರತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಹೊಸ ನೀತಿಯನ್ನು ಶಾಲೆಗಳು ಜಾರಿಗೆ ತರುತ್ತಿವೆ ಎಂದು ವರದಿಯೊಂದು ತಿಳಿಸಿದೆ.





